ತುಮಕೂರು ಜಿಲ್ಲೆಗೆ ಎಚ್.ಎ.ಎಲ್ ಹೆಲಿಕಾಪ್ಟರ್ ತಯಾರಿಕಾ ಘಟಕ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಮಂಜೂರಾಯಿತು ಎಂದು ತುಮಕೂರು ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು ಹೇಳಿದರು.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಯುಪಿಎ ಸರ್ಕಾರದ ಅವಧಿಯಲ್ಲಿ ನಾನು ಲೋಕಸಭಾ ಸದಸ್ಯನಾಗಿದ್ದೆ. ಆ ವೇಳೆ ತುಮಕೂರಿಗೆ ಎಚ್ಎಎಲ್ ಘಟಕ ಮಂಜೂರು ಮಾಡುವಂತೆ ಮನವಿ ಮಾಡಿದೆ. ಅದಕ್ಕೆ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ರಕ್ಷಣಾ ಸಚಿವ ಎ.ಕೆ.ಆಂಟನಿ ಮಂಜೂರು ಮಾಡಿದರು. ಹಾಗಾಗಿ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಬಿಜೆಪಿ ನೇತೃತ್ವದ ಎನ್.ಡಿ.ಎ ಅಧಿಕಾರಕ್ಕೆ ಬಂದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು 2016ರಲ್ಲಿ ಗುಬ್ಬಿ ಸಮೀಪ 610 ಎಕರೆ ಪ್ರದೇಶದ ಸರ್ಕಾರಿ ಭೂಮಿಯಲ್ಲಿ ಲಘು ಹೆಲಿಕಾಪ್ಟರ್ ತಯಾರಿಕಾ ಘಟಕದ ಶಂಕುಸ್ಥಾಪನೆ ನೆರವೇರಿಸಿದ್ದರು ಎಂದು ವಿವರಿಸಿದರು.
ಹೆಲಿಕಾಪ್ಟರ್ ತಯಾರಿಕಾ ಘಟಕ ಇಂಡೋ-ರಷ್ಯನ್ ಜಂಟಿಯಾಗಿ ಹೆಲಿಕಾಪ್ಟರ್ ತಯಾರಿಕೆ ಮಾಡಲಿವೆ. ಕೆಎ 226ಟಿ ಅವಳಿ ಇಂಜಿನ್ ಹೆಲಿಕಾಪ್ಟರ್ ಮತ್ತು 3 ಟನ್ ಸಾಮರ್ಥ್ಯದ ಹೊಸ ಪೀಳಿಗೆ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ ಗಳನ್ನು ಮೇಕ್ ಇನ್ ಇಂಡಿಯಾ ಮತ್ತು ವೋಕಲ್ ಫಾರ್ ಲೋಕಲ್ ಎಂಬ ಘೋಷಣೆಯಡಿ ತಯಾರಿಸುವ ಯೋಜನೆ ಇದಾಗಿದೆ ಎಂದರು.
ಗುಬ್ಬಿ ಸಮೀಪವಿರುವ ಹೆಲಿಕಾಪ್ಟರ್ ಘಟಕದಲ್ಲಿ ಮುಂದಿನ 15 ವರ್ಷಗಳಲ್ಲಿ 600 ಹೆಲಿಕಾಪ್ಟರ್ ಉತ್ಪಾದನೆ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದರು.
ಈಗಾಗಲೇ ಎಚ್.ಎ.ಎಲ್ ರಕ್ಷಣಾ ಇಲಾಖೆ ಹಾಗೂ ವಿವಿಧ ದೇಶ-ವಿದೇಶಗಳ ಖಾಸಗಿ ಕಂಪನಿಗಳಿಂದ ಮುಂಗಡವಾಗಿ ಆರ್ಡರ್ ಪಡೆದಿರುವುದು ಸಂತೋಷದ ಸಂಗತಿಯಾಗಿದೆ ಎಂದು ತಿಳಿಸಿದರು.
ಗುಬ್ಬಿಯ ಬಿದರೆಹಳ್ಳ ಕಾವಲ್ ನಲ್ಲಿ ಫೆಬ್ರವರಿ 6ರಂದು ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ನ ಲಘು ಹೆಲಿಕಾಪ್ಟರ್ ಕಾರ್ಖಾನೆ ಉದ್ಘಾಟನೆ, ಚಿಕ್ಕನಾಯಕನಹಳ್ಳಿ ಹಾಗೂ ತಿಪಟೂರು ತಾಲೂಕಿನ ವ್ಯಾಪ್ತಿಯ ಮನೆಮನೆಗೆ ಗಂಗೆ ಹರಿಸುವ ಜಲ್ ಜೀವನ್ ಮಿಷನ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸುವರು.