ಹಂಪಿ ಉತ್ಸವದ ಕವಿಗೋಷ್ಠಿಯಲ್ಲಿ ನನ್ನ ಹೆಸರಿರುವುದನ್ನು ಈಗಷ್ಟೇ ಗಮನಿಸಿದ್ದೇನೆ. ನಿನ್ನೆ ರಾತ್ರಿಯಷ್ಟೆ ಆಯೋಜಕರು ನನಗೆ ಆಹ್ವಾನಿಸಿದ್ದರು. ನಾನು ಈ ಅಹ್ವಾನವನ್ನು ನಿರಾಕರಿಸಿದ್ದೆ. ಮುದ್ರಣಕ್ಕೆ ಹೋದ ಬಳಿಕ ಒಪ್ಪಿಗೆ ಕೇಳಿರಬಹುದು ಎನಿಸುತ್ತಿದೆ ಎಂದು ಬಂಡಾಯ ಸಾಹಿತಿ ಬಿ. ಪೀರ್ ಬಾಷಾ ತಿಳಿಸಿದ್ದಾರೆ.
ಆಯೋಜಕರ ಆಹ್ವಾನವನ್ನು ನಿರಾಕರಿಸಿದ ನಂತವು ಹೆಸರು ಹಾಕಿಕೊಂಡಿರುವ ರೀತಿ ಸರಿಯಲ್ಲ. ಇದು ಎರಡನೆ ಬಾರಿ ಹೀಗಾಗುತ್ತಿದೆ. ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇನೆ. ದಸರಾವನ್ನೂ ಒಳಗೊಂಡಂತೆ ಸರ್ಕಾರದಿಂದ ಆಯೋಜಿಸುತ್ತಿರುವ ಯಾವುದೇ “ಉತ್ಸವ”ಗಳಲ್ಲಿ ನಾನು ನನ್ನ ಕವಿತೆ ಓದಲಾರೆ ಎಂದು ಹೇಳಿದ್ದಾರೆ.
ಇಂತಹ ಉತ್ಸವಗಳ ಬಗ್ಗೆ ನನ್ನ ವಿರೋಧವಿದೆ. ಒಬ್ಬ ಜನತಂತ್ರವಾದಿಯಾಗಿ ಇಂತಹ ಉತ್ಸವಗಳನ್ನು ಒಪ್ಪಲಾರೆ. ಇಂತಹ ಉತ್ಸವಗಳ ಹೆಸರಿನಲ್ಲಿ ನಡೆವ ಕೋಟ್ಯಂತರ ರೂಪಾಯಿಗಳ ದುರ್ವ್ಯೆವಹಾರದ ತಿಳಿವಳಿಕೆ ನನಗಿದೆ. ಈ ಉತ್ಸವ ಕೂಟಗಳಲ್ಲಿ ಭಾಗವಹಿಸುವ ಮೂಲಕ ಅಂತಹದ್ದಕ್ಕೆ ಪರೋಕ್ಷ ಸಮ್ಮತಿ ನೀಡುವ ಅಥವಾ ಅಂತಹ ಪಾಪದಲ್ಲಿ ಪಾಲುಗೊಳ್ಳುವ ಕವಿ ನಾನಾಗಲಾರೆ ಎಂದು ತಿಳಿಸಿದ್ದಾರೆ.
ನನ್ನ ಅಸಮ್ಮತಿಯ ನಂತರವೂ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಪ್ರಕಟವಾಗಿದೆ. ಹಂಪಿ ಉತ್ಸವದ ಕವಿಗೋಷ್ಠಿಯಲ್ಲಿ ನಾನು ಭಾಗವಹಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.