ತುಮಕೂರು ನಗರದ ಹೆಗಡೆ ಕಾಲೋನಿ ಬಳಿ ಇರುವ ರೈಲ್ವೆ ಅಂಡರ್ ಪಾಸ್ ನಿಂದಾಗಿ ಹಲವು ಸಮಸ್ಯೆ ಆಗುತ್ತಿದ್ದು ಇದರಿಂದ ಪಾದಚಾರಿಗಳು ಈ ಭಾಗದಲ್ಲಿ ಸಂಚರಿಸಲು ಆಗುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್ ಆರೋಪಿಸಿದ್ದಾರೆ.
ಕೂಡಲೇ ಜಿಲ್ಲಾಡಳಿತ ಮಧ್ಯಪ್ರವೇಶಸಿ ಸಾರ್ವಜನಿಕರು ಹಾಗೂ ವಾಹನ ಸವಾರರ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಕಳೆದ ಮೂರು ತಿಂಗಳ ಹಿಂದೆ ಆಟೋ ಚಾಲಕ ಅಮ್ಜದ್ ಖಾನ್ ಇದೆ ಜಾಗದಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದ ಘಟನೆ ಮಾಸುವ ಮುನ್ನವೆ ಹಲವು ಅಪಘಾತಗಳು ನಡೆದಿದ್ದು ಇದರಿಂದ ಸಾರ್ವಜನಿಕರು, ಪಾದಾಚಾರಿಗಳು, ಮಕ್ಕಳು ಹಾಗೂ ಮಹಿಳೆಯರು ಈ ಭಾಗದಲ್ಲಿ ಸಂಚರಿಸಲು ಸಾಕಷ್ಟು ತೊಂದರೆ ಉಂಟಾಗುತ್ತಿದೆ ಎಂದು ಹೇಳಿದ್ದಾರೆ.
ರೈಲ್ವೆ ಇಲಾಖೆಯಿಂದ ನಿರ್ಮಿಸಿರುವ ರೈಲ್ವೆ ಅಂಡರ್ ಪಾಸ್ ನಲ್ಲಿ ಸಾಕಷ್ಟು ಸಮಸ್ಯೆ ಉಂಟಾಗಿದೆ. ಪ್ರತಿನಿತ್ಯ ಸಾವಿರಾರು ಸಾರ್ವಜನಿಕರು ಸಂಚರಿಸುವ ಜನ ದಟ್ಟಣೆ ಪ್ರದೇಶವಾಗಿದ್ದು ಯಾವುದೇ ಸುರಕ್ಷತಾ ಕ್ರಮಗಳು ರೈಲ್ವೆ ಅಂಡರ್ ಪಾಸ್ ನಲ್ಲಿ ಇಲ್ಲದ ಕಾರಣ ಸಾರ್ವಜನಿಕರಿಗೆ ಪ್ರತಿನಿತ್ಯ ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
ರೈಲ್ವೆ ಇಲಾಖೆ ನಿರ್ಮಿಸಿರುವ ಅಂಡರ್ ಪಾಸ್ ಹಾಗೂ ಬ್ರಿಡ್ಜ್ ಸಾರ್ವಜನಿಕರಿಗೆ ಸರಿಯಾದ ರೀತಿಯಲ್ಲಿ ಬಳಕೆಯಾಗುತ್ತಿಲ್ಲ. ಅಲ್ಲದೆ ಇಲಾಖೆಗಳ ಸಮನ್ವಯ ಕೊರತೆಯಿಂದ ಸಮಸ್ಯೆ ಉದ್ಭವವಾಗಿದ್ದು ಕೂಡಲೇ ಸಂಬಂಧಪಟ್ಟ ಇಲಾಖೆಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಹಾಗಾಗಿ ಅಂಡರ್ ಪಾಸ್ ಬಳಿ ಇರುವ ಸಣ್ಣ ರೈಲ್ವೆ ಬ್ರಿಡ್ಜನ್ನ ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಅನುವು ಮಾಡಿಕೊಟ್ಟರೆ ಈ ಭಾಗದಲ್ಲಿ ಪ್ರತಿನಿತ್ಯ ಸಂಚರಿಸುವ ಗಾರ್ಮೆಂಟ್ಸ್ ಕಾರ್ಮಿಕರು, ಮಕ್ಕಳು ಹಾಗೂ ವಯೋವೃದ್ದರಿಗೆ ಅನುಕೂಲವಾಗಲಿದೆ. ಹಾಗಾಗಿ ಇದಕ್ಕೆ ಸಂಬಂಧಪಟ್ಟ ಇಲಾಖೆಗಳು ಕೂಡಲೇ ಕ್ರಮ ತೆಗೆದುಕೊಂಡು ಬ್ರಿಡ್ಜನ್ನು ದುರಸ್ತಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.