ಪ್ರಧಾನಿ ನರೇಂದ್ರ ಮೋದಿಯವರೇ, ಮಹದಾಯಿ ನದಿನೀರಿನ ಯೋಜನೆ ಬಗ್ಗೆ ಕೇಂದ್ರ ಸರ್ಕಾರದ ಸ್ಪಷ್ಟ ನಿಲುವನ್ನು ಘೋಷಿಸಿಬಿಡಿ. ಎರಡು ವರ್ಷ ಹತ್ತು ತಿಂಗಳ ವರೆಗೆ ಮುಚ್ಚಿಟ್ಟು ಈಗ ಅನುಮತಿ ನೀಡಿರುವುದು ನ್ಯಾಯದ ತೀರ್ಮಾನವೇ? ಅನ್ಯಾಯದ ಆಟವೇ? ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಗೋವಾ ಮುಖ್ಯಮಂತ್ರಿಗಳ ನೇತೃತ್ವದ ನಿಯೋಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ನೀರಾವರಿ ಸಚಿವ ಗಜೇಂದ್ರ ಸಿಂಗ್ ಅವರನ್ನು ಭೇಟಿ ಮಾಡಿ ಡಿಪಿಆರ್ ಗೆ ನೀಡಿರುವ ಅನುಮತಿಯನ್ನು ಹಿಂದೆಗೆದುಕೊಳ್ಳಲು ಮನವಿ ಮಾಡಿದೆ. ಗೃಹಸಚಿವ ಅಮಿತ್ ಶಾ ಅವರು ಆಶಾದಾಯಕ ಭರವಸೆ ನೀಡಿದ್ದಾರಂತೆ. ಏನಿದು ಡಬಲ್ ಗೇಮ್? ಎಂದು ಕೇಳಿದ್ದಾರೆ.
ಮಹದಾಯಿ ನದಿ ನೀರಿನ ವಿವಾದ ಇತ್ಯರ್ಥಕ್ಕಾಗಿ ಗೋವಾ ಮುಖ್ಯಮಂತ್ರಿಗಳು ಪ್ರಾಧಿಕಾರ ರಚಿಸಲು ಕೇಳಿಕೊಂಡಿದ್ದಾರಂತೆ. ಇದು ವಿಳಂಬ ನೀತಿಯ ಕಾರ್ಯತಂತ್ರ. ಗೋವಾ ಸರ್ಕಾರದ ಒತ್ತಡಕ್ಕೆ ಮಣಿದು ಡಿಪಿಆರ್ ಗೆ ನೀಡಿರುವ ಅನುಮತಿಯನ್ನು ವಾಪಸು ಪಡೆಯಬಾರದು ಎಂದು ಪ್ರಧಾನಿಯವರಲ್ಲಿ ಮನವಿ ಮಾಡುತ್ತೇನೆ ಎಂದಿದ್ದಾರೆ.
ರಾಜ್ಯದ ಮುಖ್ಯಮಂತ್ರಿಗಳು ಈ ಬೆಳವಣಿಗೆಯನ್ನು ಗಮನಿಸಿದ್ದಾರೆಂದು ನಂಬಿದ್ದೇನೆ. ಈ ರಾಜಕೀಯ ಜಿದ್ದಾಜಿದ್ದಿಯಲ್ಲಿ ಬಲಶಾಲಿಯಾಗಿದ್ದವರೇ ಗೆಲ್ಲುವುದು ರಾಜನೀತಿ. ಮುಖ್ಯಮಂತ್ರಿಗಳು ಮತ್ತು ರಾಜ್ಯದ ಇಪ್ಪತ್ತೈದು ಬಿಜೆಪಿ ಸಂಸದರು ರಾಜ್ಯಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.


