ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರ ಬದುಕಿನಲ್ಲಿ ಮತ್ತೆ ಬೆಳಕು ತರುವ ದೃಷ್ಟಿಯಿಂದ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಘೋಷಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಇಂದು ಆರಂಭಿಸಿದ ಪ್ರಜಾಧ್ವನಿ ಯಾತ್ರೆ ನಿಮಿತ್ತ ಚಿಕ್ಕೋಡಿಯಲ್ಲಿ ಬುಧವಾರ ನಡೆದ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ‘ಇದೊಂದು ಐತಿಹಾಸಿಕ ದಿನ. ಕಾಂಗ್ರೆಸ್ ಪಕ್ಷ ರಾಜ್ಯದ ಜನರ ಸಮಸ್ಯೆ, ನೋವು, ಅಭಿಪ್ರಾಯವನ್ನು ಸಂಗ್ರಹಿಸಿ ಅದರ ಪ್ರತಿಧ್ವನಿಯಾಗಿ ನಿಮಗೆ ಶಕ್ತಿ ನೀಡಲು, ನಿಮ್ಮ ಬದುಕಿಗೆ ಬೆಳಕು ನೀಡಲು ನಾವು ಇಲ್ಲಿಗೆ ಬಂದಿದ್ದೇವೆ. ಜನರ ಸಂಕಷ್ಟ ಪರಿಹಾರ ಮಾಡುವುದೇ ಈ ಪ್ರಜಾಧ್ವನಿ ಯಾತ್ರೆಯ ಉದ್ದೇಶ ಎಂದರು.
ಮಹಿಳೆಯರು, ಯುವಕರು, ರೈತರು 200 ಯುನಿಟ್ ವರೆಗೂ ವಿದ್ಯುತ್ ದರ ಕಟ್ಟುವಂತಿಲ್ಲ. ನಾವು ನುಡಿದಂತೆ ನಡೆದಿದ್ದೇವೆ. ನಡೆಯುತ್ತೇವೆ. ನಾಡಿನ ಜನರ ಭವಿಷ್ಯಕ್ಕಾಗಿ ನಾವು ಅನೇಕ ಯೋಜನೆ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ಕಳೆದ ಮೂರು ವರ್ಷಗಳಿಂದ ರಾಜ್ಯ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಕಳಂಕ ತಂದಿದೆ. ಈ ಕಳಂಕ ನಿರ್ಮೂಲನೆ ಮಾಡಬೇಕು. ಜನರ ಅಭಿಪ್ರಾಯಕ್ಕೆ ಸ್ಪಂದಿಸಿ, ಪ್ರಜೆಗಳ ಧ್ವನಿ ತಿಳಿಸಲು ನಾವು ಈ ಐತಿಹಾಸಿಕ ಸ್ಥಳದಿಂದ ನಮ್ಮ ಪ್ರಜಾಧ್ವನಿ ಯಾತ್ರೆ ಆರಂಭಿಸುತ್ತಿದ್ದೇವೆ ಎಂದು ಹೇಳಿದರು.
ಇಂದು ಆರಂಭವಾಗಲಿರುವ ಯಾತ್ರೆ ಈ ತಿಂಗಳು ಜಿಲ್ಲಾ ಕೇಂದ್ರಗಳಲ್ಲಿ ಪ್ರವಾಸ ಮಾಡಲಿದೆ. ನಂತರ 224 ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರವಾಸ ಮಾಡುತ್ತೇವೆ. ಪ್ರಮುಖ ನಾಯಕರು ಬಸ್ ನಲ್ಲಿ ತೆರಳುತ್ತೇವೆ. ಎಲ್ಲ ನಾಯಕರು ಬಸ್ ನಲ್ಲಿ ಸಾಗಲು ಸಾಧ್ಯವಿಲ್ಲ. ಆಯಾ ಸ್ಥಳಕ್ಕೆ ಹೋದಾಗ ಕೆಲ ನಾಯಕರು ನಮ್ಮನ್ನು ಸೇರಿಕೊಳ್ಳುತ್ತಾರೆ. 20 ಜಿಲ್ಲೆಗಳಲ್ಲಿ ನಾನು, ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್, ಹೆಚ್.ಕೆ ಪಾಟೀಲ್, ಆ ಭಾಗದ ಶಾಸಕರು ಇರುತ್ತಾರೆ. ಕೆಲವರು ಕಾರ್ಯಕ್ರಮ ಆಯೋಜನೆಯಲ್ಲಿ ನಿರತರಾಗಿರುತ್ತಾರೆ ಎಂದು ತಿಳಿಸಿದರು.
ಹೊಸಬರ ಬಗ್ಗೆ ನಾವು ಆಲೋಚನೆ ಮಾಡುತ್ತೇವೆ. ಹೊಸ ನೀರು, ಹೊಸ ಚಿಗುರು ಬಗ್ಗೆ ಕಾಂಗ್ರೆಸ್ ಸದಾ ಆಲೋಚನೆ ಮಾಡುತ್ತಿರುತ್ತದೆ. ನಮ್ಮ ಯಾತ್ರೆ ಜನರ ಬದುಕಿನಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ತಿಳಿಸಲಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಹೇಗೆ ಸಂವಿಧಾನ, ಕಾನೂನು ರಕ್ಷಣೆ ಮಾಡಿದೆ. ಜನರಿಗೆ ಕಾರ್ಯಕ್ರಮ ನೀಡಿದೆ. ಅವರ ಬದುಕಿನಲ್ಲಿ ಹೇಗೆ ಬದಲಾವಣೆ ತಂದಿದೆ ಎಂಬುದನ್ನು ತಿಳಿಸಲಿದೆ ಎಂದರು.