ನಾವು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಹಿಂದೆಂದೂ ಕಾಣದ ದುರಿತ ಕಾಲವನ್ನು ಎದುರಿಸುತ್ತಿದ್ದೇವೆ. ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಬಿಕ್ಕಟ್ಟುಗಳು ಉಮ್ಮಳಿಸಿ ಏಳುತ್ತಿವೆ ಎಂದು ಹಿರಿಯ ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಕೆ.ಆರ್ ಸರ್ಕಲ್ ಬಳಿಯ ಅಲುಮ್ನಿ ಅಸೋಸಿಯೇಷನ್ ಆವರಣದಲ್ಲಿ ನಡೆದ ಜನಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ತು ಎಲ್ಲಾ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ, ಎಲ್ಲರ ಆಶೋತ್ತರಗಳಿಗೂ ಪೂರ್ವಗ್ರಹಗಳಿಂದ ಮುಕ್ತವಾಗಿ ಸಮಾನವಾಗಿ ಸ್ಪಂದಿಸಬೇಕಾದ ಸಂಸ್ಥೆ, ಆದರೆ ಪ್ರಸ್ತುತ ಅವಧಿಯ ಅಧ್ಯಕ್ಷರಲ್ಲಿ ಅತೃಪ್ತಿ ಕಾಣಿಸಿಕೊಂಡಿದೆ ಎಂದು ಹೇಳಿದರು.
ಸಾಹಿತ್ಯವೆಂದರೆ ಜನ-ಜನರ ಬದುಕಿನ ಪ್ರತಿಫಲನ, ಜನರ ಬದುಕಿಗೆ ಸಂಬಂಧಿಸಿದ ಕುಟುಂಬ, ಸಮಾಜ, ದೇಶ, ಭಾಷೆ, ನೆಲ, ಜಲ, ಇತಿಹಾಸ, ಧರ್ಮ, ಪರಂಪರೆ ಇವೆಲ್ಲವೂ ರೂಪುಗೊಳ್ಳುವುದು ಸಾಹಿತ್ಯದ ಮೂಲಕ ಎಂದು ತಿಳಿಸಿದರು.
ಸಾಹಿತ್ಯ ಪರಿಷತ್ತು ಹಳಿ ತಪ್ಪಿದಾಗಲೆಲ್ಲಾ ಜನರೇ ಎಚ್ಚರಿಸುತ್ತಾ ಬಂದ ಪರಿಪಾಠವಿದೆ. 1992ರಲ್ಲಿ ಜಾಗೃತ ಸಮ್ಮೇಳನ ನಡೆದದ್ದು ಹೀಗೆ. ಅಂದು ಸಮ್ಮೇಳನಾಧ್ಯಕ್ಷರ ಆಯ್ಕೆಯನ್ನು ಪ್ರಶ್ನಿಸಲಾಗಿತ್ತು. ಅಂದಿನ ತಲೆಮಾರಿನ ದಿಗ್ಗಜರೆನಿಸಿದ ಲಂಕೇಶ್, ಅನಂತಮೂರ್ತಿ. ಕಿ.ರಂ.ನಾಗರಾಜ್ ಸೇರಿದಂತೆ ಹಲವರು ಸಂಘಟಿಸಿದ ಸಮ್ಮೇಳನ ಅದಾಗಿತ್ತು ಎಂದರು.
ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ ಗಂಭೀರವಾದ ಲೋಪವೊಂದು ಎಲ್ಲರ ಕಣ್ಣಿಗೆ ರಾಚುವಂತಿದೆ. ಒಂದು ಪಂಥ ತಮ್ಮ ಸ್ವಾರ್ಥ ಸಾಧನೆಗೆ ಧರ್ಮವನ್ನು ಗುರಾಣಿಯಾಗಿಸಿಕೊಂಡು ಮುಗ್ದ ಬಹುಜನರನ್ನು ಮರುಳುಮಾಡಿ ನಾವು ಮತ್ತು ಅವರು ಎಂಬ ಸ್ಪಷ್ಟ ಗೆರೆ ಎಳೆದುಬಿಟ್ಟಿದೆ. ಅಂತಹ ಒಂದು ಅಜೆಂಡಾ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯಕ್ಕೆ ನುಸುಳಿರುವುದು ಆಘಾತಕಾರಿಯಾದದ್ದು ಎಂದು ಹೇಳಿದರು.
ಕೃಪೆ:ನಾನು ಗೌರಿ.ಕಾಂ


