ಭ್ರಷ್ಟಾಚಾರದಿಂದ ಹೊರಬರಬೇಕಾದರೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲೇಬೇಕು. ಜನರೂ ಕೂಡ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬುದನ್ನು ಹೇಳುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕು ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಾನು ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿದ್ದೇನೆ. ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರವಾಸ ಮಾಡಿದ್ದಾರೆ. ಹೋದ ಕಡೆಯಲ್ಲ ಜನರು ಹೇಳುತ್ತಿದ್ದಾರೆ. ಈ ಸಲ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದರು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸರ್ಕಾರ 40 ಪರ್ಸೆಂಟ್ ಕಮಿಷನ್ ಕೇಳುತ್ತಿದೆ. ನಾವು ಗುತ್ತಿಗೆ ಪಡೆದು ಕೆಲಸ ಮಾಡಿಸೋದಕ್ಕೆ ಆಗುತ್ತಿಲ್ಲ ಪ್ರಧಾನ ಮಂತ್ರಿಗಳೇ, ನೀವು ತನಿಖೆ ಮಾಡಿಸಿ, ಲಕ್ಷಾಂತರ ಕೋಟಿ ರೂಪಾಯಿ ಬಿಲ್ ಬಾಕಿ ಇದೆ. ಹೀಗಾಗಿ ಹಲವು ಮಂದಿ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಸರ್ಕಾರ 40ರಷ್ಟು ಕಮಿಷನ್ ಪಡೆಯುತ್ತಿರುವ ಬಗ್ಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ದೂರು ನೀಡಿದರು. ಇಷ್ಟು ದಿನವಾದರೂ ಆ ಬಗ್ಗೆ ತನಿಖೆ ನಡೆಸಲಿಲ್ಲ. ತನಿಖೆ ನಡೆಸುವುದು ಬಿಟ್ಟು ಕೆಂಪಣ್ಣ ಅವರನ್ನೇ ಬಂಧಿಸಲಾಯಿತು. ಇದು ಎಷ್ಟು ದಿನ ನಡೆಯುತ್ತೆ ಮುಖ್ಯಮಂತ್ರಿಗಳೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಮುಖ್ಯಮಂತ್ರಿಗಳ ಬಗ್ಗೆ ಹಗುರವಾಗಿ ಮಾತನಾಡಿದ್ದೇನೆ ಎಂದು ಬಸವರಾಜ್ ಬೊಮ್ಮಾಯಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. ನಾನು ಲಘುವಾಗಿ ಮಾತನಾಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಮುಂದೆ ನಾಯಿಮರಿ ಇದ್ದ ಹಾಗೆ ಇರ್ತಾರೆ ಎಂದಿದ್ದೇನೆ. ಗ್ರಾಮೀಣ ಭಾಷೆಯಲ್ಲಿ ಹೇಳಿದ ಹಾಗೆ ಹೇಳಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಸಿದ್ದರಾಮಯ್ಯ ಏನು ತಂದರು ಎಂದು ಸಿಎಂ ಕೇಳಿದ್ದಾರೆ. ಮನಮೋಹನ್ ಸಿಂಗ್ ಅವಧಿಯಲ್ಲಿ ರೈತರ 78 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದರು. ನಾನು ಕೂಡ ಸಾಲ ಮನ್ನಾ ಮಾಡಿದೆ. ಆದರೆ ನರೇಂದ್ರ ಮೋದಿ ಒಂದು ರೂಪಾಯಿ ಸಾಲವನ್ನೂ ಮನ್ನಾ ಮಾಡಿದರೇ, ಬೊಮ್ಮಾಯಿ, ಯಡಿಯೂರಪ್ಪ ಮನ್ನಾ ಮಾಡಿದರೆ ಎಂದು ಪ್ರಶ್ನಿಸಿದರು.
ಪ್ರಧಾನಿ ಮೋದಿ ಅಂಬಾನಿ, ಅದಾನಿಯವರ ಸಾಲ ಮನ್ನಾ ಮಾಡಿದ್ದಾರೆ. ನಾವು ರೈತರ ಸಾಲ ಮನ್ನಾ ಮಾಡಿದ್ದರೆ, ಅವರು ಬಂಡವಾಳಶಾಹಿಗಳ ಸಾಲ ಮನ್ನಾ ಮಾಡಿದ್ದಾರೆ ಎಂದು ದೂರಿದರು.
ಕಾಂತರಾಜ್ ಅವರು ಜೆಡಿಎಸ್ ನಿಂದ ಹಾಲಿ ವಿಧಾನಪರಿಷತ್ ಸದಸ್ಯರಾಗಿದ್ದು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಯಾವುದೇ ಷರತ್ತು ಇಲ್ಲದೇ ಕಾಂಗ್ರೆಸ್ ಸೇರಿದ್ದಾರೆ. ಇಲ್ಲಿ ಸಾಕಷ್ಟು ಮಂದಿ ಕಾಂಗ್ರೆಸ್ ನಾಯಕರು ಕಷ್ಟದ ಸಮಯದಲ್ಲಿ ಪಕ್ಷದ ಪರ ನಿಂತಿದ್ದಾರೆ. ಇಲ್ಲಿ ಬೇರೆಯವರಿಗೆ ಶಕ್ತಿ ಇಲ್ಲ ಎಂದು ಹೇಳುವುದಿಲ್ಲ. ಎಲ್ಲರೂ ಶಕ್ತಿವಂತರು. ಆದರೆ ರಾಜಕಾರಣದಲ್ಲಿ 49 ಶೂನ್ಯವಾದರೆ, 51 ನೂರಕ್ಕೆ ಸಮನಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 136 ಸೀಟು:
ನಮ್ಮ ಪಕ್ಷದ ವತಿಯಿಂದ ನಾವು ಸಮೀಕ್ಷೆ ಮಾಡಿಸಿದ್ದೇವೆ. ಕಾಂಗ್ರೆಸ್ ಪಕ್ಷಕ್ಕೆ 136, ಬಿಜೆಪಿಗೆ 60 ಕ್ಷೇತ್ರಗಳು ಬರುತ್ತದೆ ಎಂದು ಸಮೀಕ್ಷೆ ವರದಿ ಬಂದಿದೆ ಎಂದರು.
ಬಿಜೆಪಿಯವರು ಕೇವಲ ಭಾವನಾತ್ಮಕ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಮೊನ್ನೆ ನಳೀನ್ ಕುಮಾರ್ ಕಟೀಲ್ ಅವರು ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಬೇಡಿ, ಲವ್ ಜಿಹಾದ್, ಧರ್ಮದ ಬಗ್ಗೆ ಚರ್ಚೆ ಮಾಡಿ ಎಂದಿದ್ದಾರೆ. ನಿಮ್ಮ ಭೂಮಿಯಲ್ಲಿ ಕೆರೆಗಳು ತುಂಬಬೇಕು, ಪಕ್ಕದ ಹೋಬಳಿ ಗಳಲ್ಲಿ ಅಂತರ್ಜಲ ಹೆಚ್ಚಬೇಕು. ಹೇಮಾವತಿ ನೀರು ಬರಬೇಕು. ಇದು ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಸಾಧ್ಯ. ಇದು ನಮ್ಮ ಸಂಕಲ್ಪ ಎಂದು ವಿವರಿಸಿದರು.
ಕೊಬ್ಬರಿಗೆ ಮತ್ತೆ ಬೆಲೆ ಬರಬೇಕು. ಈ ಭಾಗದ ಮುಖ್ಯ ಬೆಳೆ ತೆಂಗು. ರೈತರಿಗೆ ಸಂಬಳ, ಬಡ್ತಿ, ನಿವೃತ್ತಿ, ಲಂಚ ಯಾವೂದು ಇಲ್ಲ. ಹೀಗಾಗಿ ರೈತರ ರಕ್ಷಣೆ ನಾವು ಮಾಡುತ್ತೇವೆ. ತೆಂಗು, ಅಡಿಕೆ, ರಾಗಿ ಬೆಳೆಗಾರರ ರಕ್ಷಣೆ ಮಾಡಲು, ಯುವಕರಿಗೆ ಉದ್ಯೋಗ ನೀಡಲು ನಾವು ಬದ್ಧರಾಗಿದ್ದೇವೆ. ಇನ್ನು ಸರ್ಕಾರಿ ನೌಕರರು ಹಳೆ ಪಿಂಚಣಿ ಪದ್ಧತಿ ಜಾರಿಗೆ ಆಗ್ರಹಿಸುತ್ತಿದ್ದಾರೆ. ನಮ್ಮ ಸರ್ಕಾರ ಈಗಾಗಲೇ ರಾಜಸ್ಥಾನದಲ್ಲಿ, ಹಿಮಾಚಲ ಪ್ರದೇಶದಲ್ಲಿ ಈ ವಿಚಾರವಾಗಿ ತೀರ್ಮಾನ ಮಾಡಿದೆ. ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರೆಲ್ಲರೂ ಚರ್ಚೆ ಮಾಡಿ ತೀರ್ಮಾನ ಘೋಷಣೆ ಮಾಡುತ್ತೇವೆ. ಎಲ್ಲರಿಗೂ ನ್ಯಾಯ ಒದಗಿಸುತ್ತೇವೆ, ನಮಗೆ ಶಕ್ತಿ ನೀಡಿ. ನಾವು ನಿಮ್ಮ ಸೇವೆ ಮಾಡುತ್ತೇವೆ ಎಂದು ಹೇಳಿದರು.