ಸಿಟಿಜನ್ ಫಾರ್ ಡೆಮೊಕ್ರಸಿ, ಜನಾಂದೋಲನಗಳ ಮಹಾ ಮೈತ್ರಿ, ಸಂಯುಕ್ತ ಹೋರಾಟ ಕರ್ನಾಟಕ – ಜನತಂತ್ರ ಪ್ರಯೋಗಶಾಲೆ ಇವರ ಸಹಯೋಗದಲ್ಲಿ ಸಂಘಟಿಸಿರುವ ಸಮಾಜ ಪರಿವರ್ತನಾ ಸತ್ಯಾಗ್ರಹ ಯಾತ್ರೆ ತುಮಕೂರಿಗೆ ಜನವರಿ 10ರಂದು ಆಗಮಿಸಲಿದೆ.
ಆ ದಿನ ಬೆಳಗ್ಗೆ 10 ಗಂಟೆಗೆ ತುಮಕೂರಿನ ಸ್ವಾತಂತ್ರ್ಯ ಚೌಕದಲ್ಲಿ ಜಾಥಾ ತಂಡವನ್ನು ಸ್ವಾಗತಿಸಲಾಗುವುದು ಎಂದು ಜನಾಂದೋಲನಗಳ ಮಹಾಮೈತ್ರಿಯ ಜಿಲ್ಲಾ ಸಂಚಾಲಕ ಎನ್ ಎಸ್ ಪಂಡಿತ್ ಜವಾಹರ್ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಹುತಾತ್ಮ ಸ್ವಾತಂತ್ರ್ಯ ಯೋಧರಿಗೆ ಗೌರವಾರ್ಪಣೆ, ಜಾಥಾ ತಂಡ ಹಾಗೂ ನಾಗರಿಕರಿಂದ ಕರ್ನಾಟಕ ಸರ್ಕಾರ ಹೊರಡಿಸಿರುವ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳ ವಾಪಸ್ಸಾತಿಗೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಂದು ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಸಿ, ಮಧ್ಯಾಹ್ನ 2 ಗಂಟೆಗೆ ವಿಚಾರಗೋಷ್ಠಿ ಹಮ್ಮಿಕೊಳ್ಳಲಾಗಿದೆ.
ವಿಚಾರಗೋಷ್ಠಿಯಲ್ಲಿ ನಮಗೆ ಎಂತಹ ಕೃಷಿ ನೀತಿ ಬೇಕು ಎಂಬ ವಿಷಯದ ಬಗ್ಗೆ ಚರ್ಚೆ ನಡೆಯಲಿದೆ. ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ಆನಂದಕುಮಾರ್, ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಟಿ.ಆರ್. ಚಂದ್ರಶೇಖರ್ ಮತ್ತು ಗಾಂಧಿ ಸಹಜ ಬೇಸಾಯ ಶಾಲೆಯ ಡಾ.ಹೆಚ್.ಮಂಜುನಾಥ್ ಭಾಗವಹಿಸಲಿದ್ದಾರೆ.