ನವೀನ್ ಸೂರಂಜಿ
ಮಹೇಶ್ ಜೋಷಿ ಗುರು ಗೋವಿಂದ ಭಟ್ಟರ ಮರಿಮೊಮ್ಮಗನಲ್ಲ ! ಭಟ್ಟರೇ ಬೇರೆ ಜೋಷಿಯೇ ಬೇರೆ ಎಂದು ಗುರು ಗೋವಿಂದ ಭಟ್ಟ ದೇವಸ್ಥಾನ ಅಭಿವೃದ್ದಿ ಸಮಿತಿ ಹೇಳಿದೆ.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಷಿ ತಾನು ಗುರುಗೋವಿಂದ ಭಟ್ಟರ ಮೊಮ್ಮಗನೆಂದೂ, ನನಗಿಂತ ಜಾತ್ಯಾತೀತ ವ್ಯಕ್ತಿ ಬೇಕಾ ? ಎಂದು ಪ್ರಶ್ನಿಸಿದ್ದಾರೆ. ಆದರೆ ವಾಸ್ತವವಾಗಿ ಮಹೇಶ್ ಜೋಷಿಗೂ ಗುರು ಗೋವಿಂದ ಭಟ್ಟರಿಗೂ ಸಂಬಂಧವೇ ಇಲ್ಲ.
ಹಿಂದೂ ಹಾಗೂ ಇಸ್ಲಾಂ ಧರ್ಮಗಳ ಸಮಾನತೆ ಸಮಚಿತ್ತ ಹಾಗೂ ಸಮದೃಷ್ಟಿಯಿಂದ ನೋಡಿದ ಸಮಾನತೆಯ ಹರಿಕಾರರ ಪೈಕಿ 19ನೆಯ ಶತಮಾನದ ಕಳಸದ ಗುರು ಗೋವಿಂದ ಭಟ್ಟರು ಹಾಗೂ ಶಿಶುನಾಳ ಶರೀಫರು ಪ್ರಮುಖರು. ಇವರಿಬ್ಬರ ಬದುಕು ಹಾಗೂ ಅವರ ತತ್ವಪದಗಳೂ, ಧಾರ್ಮಿಕ ಭಾವೈಕ್ಯತೆ-ಸಮಾನತೆಗೆ ಅಪೂರ್ವ ಉದಾಹರಣೆಯಾಗಿದೆ. ಇಂತಹ ಮಹಾನ್ ಗುರು ಗೋವಿಂದ ಭಟ್ಟರ ಮರಿ ಮೊಮ್ಮಗ ತಾನೆಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಷಿ ಪದೇ ಪದೇ ಹೇಳಿಕೆ ಕೊಡುತ್ತಿದ್ದಾರೆ. ನಿಜಕ್ಕೂ ಮಹೇಶ್ ಜೋಷಿ ಎಂಬ ಪ್ರಚಾರ ಪ್ರೀಯ ವ್ಯಕ್ತಿ ಗುರು ಗೋವಿಂದ ಭಟ್ಟರ ಮರಿ ಮೊಮ್ಮಗನೇ ? ಎಂದು ಹುಡುಕುತ್ತಾ ಗುರು ಗೋವಿಂದ ಭಟ್ಟರ ದೇವಸ್ಥಾನದಲ್ಲಿ ಕ್ಷೇತ್ರಕಾರ್ಯ ಮಾಡಲಾಯಿತು.
ಶಿಥಿಲಾವಾಸ್ಥೆಯಲ್ಲಿದ್ದ ಗುರುಗೋವಿಂದ ಭಟ್ಟರ ಗರ್ಭಗುಡಿ ಕಟ್ಟಿಸಿದ ಕಾಳಪ್ಪ ಕೊಟ್ರಪ್ಪ ಪ್ಯಾಟಿ ಅವರ ಪುತ್ರ ಹಾಗೂ ಗುರುಗೋವಿಂದ ಭಟ್ಟರ ಗುಡಿ ಅಭಿವೃದ್ಧಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಶೇಖಪ್ಪ ಕಾಳಪ್ಪ ಪ್ಯಾಟಿಯವರು ನಮ್ಮೊಂದಿಗೆ ಮಾತನಾಡುತ್ತಾ “ಗುರು ಗೋವಿಂದ ಭಟ್ಟರ ವಂಶಾವಳಿಗೂ, ಮಹೇಶ್ ಜೋಷಿಯವರ ವಂಶಾವಳಿಗೂ ಸಂಬಂಧವಿಲ್ಲ. ಅವೆರಡೂ ಬೇರೆ ಬೇರೆ ವಂಶಾವಳಿಗಳು. ಗುರು ಗೋವಿಂದ ಭಟ್ಟರ ಬಗ್ಗೆ ನಮ್ಮ ಹಿರಿಯರಲ್ಲಿ ಗೊಂದಲಗಳಿವೆ. ಗೋವಿಂದ ಭಟ್ಟರಿಗೆ ಅಣ್ಣ, ತಮ್ಮ ಇದ್ದರೇ ಎಂಬ ಪ್ರಶ್ನೆಗಳಿತ್ತು. ಆದರೆ ಗೋವಿಂದ ಭಟ್ಟರಿಗೆ ಅಣ್ಣ, ತಮ್ಮ ಇರಲಿಲ್ಲ. ಅವರ ಸಂಬಂಧಿಕರು ಯಾರೂ ಕೂಡಾ ಇಲ್ಲ” ಎನ್ನುತ್ತಾರೆ.
ಮಹೇಶ್ ಜೋಷಿಗೂ ಗುರು ಗೋವಿಂದ ಭಟ್ಟರಿಗೂ ಸಂಬಂಧವೇನು ? ಎಂದು ಕೇಳಿದಾಗ “ಇಬ್ಬರೂ ಬ್ರಾಹ್ಮಣರೇ ಎಂಬ ಸಂಬಂಧ ಹೊರತುಪಡಿಸಿದರೆ ಇನ್ನಾವ ಸಂಬಂಧವೂ ಇಲ್ಲ. ಅವರು ಭಟ್ಟರು, ಇವರು ಜೋಷಿ. ಭಟ್ಟರೇ ಬೇರೆ, ಜೋಷಿಯವರೇ ಬೇರೆ” ಎಂದು ಗುರುಗೋವಿಂದ ಭಟ್ಟರ ಗುಡಿ ಅಭಿವೃದ್ಧಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಶೇಖಪ್ಪ ಕಾಳಪ್ಪ ಪ್ಯಾಟಿಯವರು ಹೇಳುತ್ತಾರೆ.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಷಿಯವರು ತಾನು ಗುರು ಗೋವಿಂದ ಭಟ್ಟರ ಮರಿ ಮೊಮ್ಮಗ ಎನ್ನುತ್ತಾರೆ. ನೀವು ಈ ಬಗ್ಗೆ ಏನಂತೀರಿ ಎಂದು ಕೇಳಿದಾಗ “ಮಹೇಶ್ ಜೋಷಿಯವರು ತಾನು ಗುರು ಗೋವಿಂದ ಭಟ್ಟರ ವಂಶಸ್ಥ ಎಂಬುದಕ್ಕೆ ದಾಖಲೆ ಕೊಡಬೇಕು. ಗುರು ಗೋವಿಂದ ಭಟ್ಟರ ವಂಶಸ್ಥರು ಯಾರೂ ಇಲ್ಲ. ಗುರು ಗೋವಿಂದ ಭಟ್ಟರ ವಂಶಸ್ಥರು ಯಾರೂ ಇಲ್ಲ ಎಂದೇ ನಾವು ತೀರ್ಮಾನಿಸಿರುವಾಗ ಈ ದೇವಸ್ಥಾನಕ್ಕೆ ಬಂದು ತಾನು ಗುರು ಗೋವಿಂದ ಭಟ್ಟರ ವಂಶಸ್ಥ ಎಂದು ಹೇಳುವವರು ದಾಖಲೆ ನೀಡಬೇಕಾಗುತ್ತದೆ” ಎಂದು ಗುರುಗೋವಿಂದ ಭಟ್ಟ ದೇವಸ್ಥಾನ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಶೇಖಪ್ಪ ಕಾಳಪ್ಪ ಪ್ಯಾಟಿಯವರು ಹೇಳುತ್ತಾರೆ.
“ಗುರು ಗೋವಿಂದ ಭಟ್ಟರ ದೇವಸ್ಥಾನದಲ್ಲಿ ಈ ಹಿಂದೆ ಅವರ ವಂಶಸ್ಥರು ಪೂಜಾದಿಗಳನ್ನು ಮಾಡುತ್ತಿದ್ದರು. ಅವರ ವಂಶಸ್ಥರು ನಶಿಸಿ ಹೋದ್ದರಿಂದ ನಾವುಗಳು ಜೋಷಿ ಮನೆತನದವರನ್ನು ಕರೆದುಕೊಂಡು ಬಂದು ಅರ್ಚನೆ ಮಾಡುತ್ತಿದ್ದೇವೆ. ಈ ದೇವಸ್ಥಾನದ ಅರ್ಚಕರ ವಂಶಕ್ಕೂ ಮಹೇಶ್ ಜೋಷಿಗೂ ಸಂಬಂಧವಿದ್ದರೂ ಇರಬಹುದು. ಗುರುಗೋವಿಂದ ಭಟ್ಟರ ವಂಶಕ್ಕೂ ಮಹೇಶ್ ಜೋಷಿ ವಂಶಕ್ಕೂ ಸಂಬಂಧವಿಲ್ಲ’ ಎಂದು ಗುರುಗೋವಿಂದ ಭಟ್ಟ ದೇವಸ್ಥಾನ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಶೇಖಪ್ಪ ಕಾಳಪ್ಪ ಪ್ಯಾಟಿಯವರು ಖಡಾಖಂಡಿತವಾಗಿ ಹೇಳುತ್ತಾರೆ.
ಗುರುಗೋವಿಂದ ಭಟ್ಟರ ಊರಾಗಿರುವ ಕಳಸ ಗ್ರಾಮದ ಹಿರಿಯ ಮುಖಂಡರೂ, ಗುರುಗೋವಿಂದ ಭಟ್ಟರ ದೇವಸ್ಥಾನ ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು ಮಾತನಾಡುತ್ತಾ “ಜೋಷಿಗೂ ಭಟ್ಟರಿಗೂ ಬ್ರಾಹ್ಮಣರು ಎಂಬುದನ್ನು ಹೊರತುಪಡಿಸಿದರೆ ಬೇರೆ ಸಂಬಂಧ ಇಲ್ಲ. ಗುರು ಗೋವಿಂದ ಭಟ್ಟರ ಮನೆತನದವರು ಯಾರೂ ಇಲ್ಲ. ಮಹೇಶ್ ಜೋಷಿ ಗುರು ಗೋವಿಂದ ಭಟ್ಟರ ಮನೆತನದವರಲ್ಲ. ಜೋಷಿ ಮನೆತನದವರು ಈ ದೇವಸ್ಥಾನದ ಪೂಜೆ ಮಾತ್ರ ಮಾಡುತ್ತಾರೆ. ಜೋಷಿ ಮನೆತನಕ್ಕೂ ನಮ್ಮ ಗುರುಗೋವಿಂದ ಭಟ್ಟ ದೇವಸ್ಥಾನಕ್ಕಾಗಲೀ, ಮನೆತನಕ್ಕಾಗಲೀ ಸಂಬಂಧವಿಲ್ಲ” ಎನ್ನುತ್ತಾರೆ.
ಕಳಸದಲ್ಲಿರುವ ಗುರು ಗೋವಿಂದ ಭಟ್ಟರ ಸಮಾಧಿ ಸ್ಥಳ ಮತ್ತು ದೇವಸ್ಥಾನದಲ್ಲಿ ಪೂಜೆಗಳು ನಡೆಯುತ್ತದೆ. ಊರವರು ಒಂದು ಸಮಿತಿ ರಚಿಸಿಕೊಂಡು ದೇವಸ್ಥಾನದ ಅಭಿವೃದ್ದಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಶಿಶುನಾಳದಲ್ಲಿರುವ ಶಿಶುನಾಳ ಶರೀಫ ದೇವಸ್ಥಾನವು ಉಚ್ಛ್ರಾಯ ಸ್ಥಿತಿಯಲ್ಲಿದ್ದು ಗುರು ಗೋವಿಂದ ಭಟ್ಟರ ದೇವಸ್ಥಾನ ಮಾತ್ರ ಅಭಿವೃದ್ದಿಯಾಗಿಲ್ಲ. ಗುರು ಗೋವಿಂದ ಭಟ್ಟರು ಸಮಾದಿಯಾದ ಸ್ಥಳ ಮತ್ತು ದೇವಸ್ಥಾನ ನೋಡಿಕೊಳ್ಳುತ್ತಿರುವ ಸಮಿತಿಯ ಪ್ರಕಾರ ಗುರು ಗೋವಿಂದ ಭಟ್ಟರ ವಂಶವೇ ಈಗ ಬದುಕಿಲ್ಲ. ಹಾಗಾಗಿಯೇ ಪೂಜೆಗೆ ಅವರು ಜೋಷಿ ಮನೆತನದವರನ್ನು ನೇಮಿಸಿದ್ದಾರೆ.
ತನ್ನ ಅಧಿಕಾರ ಮತ್ತು ಪ್ರಚಾರಕ್ಕಾಗಿ ತಾನು ಗುರು ಗೋವಿಂದ ಭಟ್ಟರ ಮರಿ ಮೊಮ್ಮಗ ಎಂದು ಮಹೇಶ್ ಜೋಷಿ ಹೇಳಿಕೊಳ್ಳುತ್ತಾರೆ. ಗುರು ಗೋವಿಂದ ಭಟ್ಟ ದೇವಸ್ಥಾನ ಸಮಿತಿಯವರು ಮಹೇಶ್ ಜೋಷಿಯವರು ಗೋವಿಂದ ಭಟ್ಟರ ಮರಿ ಮೊಮ್ಮಗ ಎಂಬುದನ್ನು ಒಪ್ಪಿಕೊಳ್ಳುವುದಿಲ್ಲ. ಇಡೀ ಹಾವೇರಿ ಜಿಲ್ಲೆ ಮತ್ತು ಕಳಸ ಗ್ರಾಮವೇ “ಗುರು ಗೋವಿಂದ ಭಟ್ಟರ ವಂಶ ನಶಿಸಿ ಹೋಗಿದೆ” ಎಂದು ತೀರ್ಮಾನಕ್ಕೆ ಬಂದಿರುವಾಗ ಮಹೇಶ್ ಜೋಷಿಯೊಬ್ಬರೇ ತಾನು ಗುರು ಗೋವಿಂದ ಭಟ್ಟರ ವಂಶಸ್ಥ ಎಂದು ಹೇಳುವುದು ಅಸಂಬದ್ದವಾಗುತ್ತದೆ.
ಲೇಖಕರು ಪತ್ರಕರ್ತರು.