ರಾಜ್ಯ ಹಾಗೂ ಸ್ಥಳೀಯ ಮಟ್ಟದಲ್ಲಿ ಅನೇಕರು ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಬೇರೆ ಪಕ್ಷದಿಂದ ಬರಲು ಇಚ್ಛಿಸುವವರಿಗೆ ಮುಕ್ತ ಆಹ್ವಾನ ನೀಡುತ್ತೇನೆ. ಯಾರೆಲ್ಲಾ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಮುಖಂಡತ್ವದಲ್ಲಿ ನಂಬಿಕೆ ಇಟ್ಟು, ಪಕ್ಷದ ಸಿದ್ಧಾಂತ ಒಪ್ಪಿ ಬೇಷರತ್ತಾಗಿ ಸೇರಬಯಸುವರೋ ಅವರು ಅರ್ಜಿ ಹಾಕಬಹುದು ಎಂದರು.
ಸ್ಥಳೀಯ ಮಟ್ಟದಲ್ಲಿ ಸೇರಲು ಅವಕಾಶ ಮಾಡಿಕೊಡಲಾಗುವುದು. ರಾಜ್ಯದಲ್ಲಿ ಬಲಿಷ್ಠ ಕಾಂಗ್ರೆಸ್ ಸರ್ಕಾರ ಬರಲಿದ್ದು, ಅದರ ಭಾಗವಾಗಿರಬೇಕು ಎಂದು ಬಯಸುವವರು ಪಕ್ಷ ಸೇರಬಹುದು ಎಂದು ಹೇಳಿದ್ದಾರೆ.
ನಾವು ಯಾರನ್ನೂ ಬೇಡ ಎಂದು ತಿರಸ್ಕರಿಸುವುದಿಲ್ಲ. ನಮ್ಮಿಂದ ದೂರ ಹೋಗಿರುವ ಅನೇಕರು ಮತ್ತೆ ಪಕ್ಷ ಸೇರುವ ಇಚ್ಛೆ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಅರ್ಜಿ ಹಾಕುವಂತೆ ತಿಳಿಸಿದ್ದೇನೆ ತಿಳಿಸಿದ್ದಾರೆ.
ಪಕ್ಷ ಸೇರುವವರಲ್ಲಿ ಈ ಹಿಂದೆ ಪಕ್ಷ ಬಿಟ್ಟು ಹೋಗಿದ್ದ 15 ಶಾಸಕರು ಇದ್ದಾರಾ ಎಂಬ ಪ್ರಶ್ನೆಗೆ, ‘ಈಗ ಆ ವಿಚಾರವನ್ನು ಬಹಿರಂಗಪಡಿಸುವುದಿಲ್ಲ. ಯಾರು ಬೇಕಾದರೂ ಅರ್ಜಿ ಹಾಕಬಹುದು ಎಂದರು.
ಬಿಜೆಪಿ ಸರ್ಕಾರದ ಭ್ರಷ್ಟಾಚಾರ ನೋಡಿ ಇಲ್ಲಿಂದ ಹೋದವರು ಸೇರಿದಂತೆ ಎಲ್ಲರೂ ಬೇಸತ್ತಿದ್ದಾರೆ. ಕೆಲವರು ತಮ್ಮ ಬೇಸರ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ವ್ಯಕ್ತಪಡಿಸಿಲ್ಲ. ಈಗ ಈ ವಿಚಾರವಾಗಿ ಹೆಚ್ಚು ಚರ್ಚೆ ಮಾಡುವುದಿಲ್ಲ’ ಎಂದು ಹೇಳಿದ್ದಾರೆ.