ಶಿಕ್ಷಣ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಸೇವಾ ಮನೋಭಾವ ಕಡಿಮೆಯಾಗಿ ವ್ಯಾಪಾರಿ ಮನೋಭಾವ ಮತ್ತು ಉದ್ಯಮಶೀಲ ಮನೋಭಾವ ಹೆಚ್ಚಳವಾಗಿದ್ದು, ಇದು ಕಳವಳಕಾರಿ ಸಂಗತಿಯಾಗಿದೆ ಎಂದು ನಾಡೋಜ ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದರು.
ತುಮಕೂರು ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಸಭಾಂಗಣದಲ್ಲಿ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವ್ಯಾಪಾರಿ ಮನೋಭಾವ ಹೆಚ್ಚಳವಾಗಿರುವುದರಿಂದ ತಳ ಸಮುದಾಯಗಳಿಗೆ ಶಿಕ್ಷಣ ಕೈಗೆಟುಕದಂತಾಗಿದೆ. ಗ್ಯಾಟ್ ಒಪ್ಪಂದದ ಪರಿಣಾಮವಾಗಿ ದೇಶದಲ್ಲಿ ಮೊದಲ ಹಂತದ ಶಿಕ್ಷಣ ವ್ಯಾಪಾರಿಕರಣಕ್ಕೆ ಕೈಹಾಕಲಾಗಿದೆ. ಅದರ ಭಾಗವಾಗಿ ದೇಶದಲ್ಲಿ ಇದು ಒಂದು ಉದ್ಯಮವಾಗಿ ಮಾರ್ಪಟ್ಟಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಾರ್ವಜನಿಕ ಶಿಕ್ಷಣ ಪದ್ದತಿ ಜಾರಿಯಲ್ಲಿದ್ದುದ್ದರಿಂದ ಬಹುತೇಕ ಎಲ್ಲಾ ವರ್ಗಗಳಿಗೂ ಶಿಕ್ಷಣ ಸಿಗುವಂತಾಯಿತು. ಸಾವಿತ್ರಿ ಬಾಯಿ ಪುಲೆ ಅವರಂಥ ಮಹನೀಯರು ಹೆಣ್ಣು ಮಕ್ಕಳಿಗೆ ಉಚಿತವಾದ ಶಿಕ್ಷಣ ಕೊಡಲು ಸಾಧ್ಯವಾಯಿತು. ಆದ್ದರಿಂದ ಶಿಕ್ಷಣ ಕ್ಷೇತ್ರದಲ್ಲಿ ಬಡ ಮಕ್ಕಳಿಗೆ ಅವಕಾಶ ದೊರೆಯದಂತಾಗಿದೆ ಎಂದು ಹೇಳಿದರು.
ನಾನು ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿಯಾಗಿದ್ದು ಇದೇ ಕಾಲೇಜಿನ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದೇನೆ. ಹಳೆ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಆಯೋಜಿಸಿರುವುದು ಉತ್ತಮ ಬೆಳವಣಿಗೆ ಮತ್ತು ನನ್ನನ್ನು ಗಣ್ಯ ವ್ಯಕ್ತಿ ಎಂಬುದನ್ನು ಪರಿಗಣಿಸದೆ ನಾನು ಸಹ ಹಳೆ ವಿದ್ಯಾರ್ಥಿಯಾಗಿ ಕಾಲೇಜು ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಸರ್ಕಾರಿ ಕಲಾ ವಿಜ್ಞಾನ ಮತ್ತು ವಾಣೀಜ್ಯ ಕಾಲೇಜಿನಲ್ಲಿ ನಾನೂ ಕೂಡ ವಿದ್ಯಾರ್ಥಿಯಾಗಿದ್ದೆ. ಸಚಿವ ಎಂಬ ಯಾವ ಅಹಂ ಇಲ್ಲದೆ ಸಾಮಾನ್ಯ ವಿದ್ಯಾರ್ಥಿಯಂತೆ ನಾವೆಲ್ಲ ಒಟ್ಟುಗೂಡಿ ಕಾಲೇಜು ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದು ಹೇಳಿದರು.
ಅಭಿವೃದ್ಧಿಗೆ ಅನುದಾನ ಮತ್ತು ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಅನುದಾನ ನೀಡಲು ನಾನು ಸಿದ್ದನಿದ್ದೇನೆ. ಮುಂದಿನ ದಿನಗಳಲ್ಲಿ ನಾನು ಓದಿದ ಕಾಲೇಜಿನ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ತಿಳಿಸಿದರು.
ಕಾಂಗ್ರೆಸ್ ನಾಯಕ ವಿ.ಎಸ್.ಉಗ್ರಪ್ಪ ಮಾತನಾಡಿ, ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಹಳೆ ವಿದ್ಯಾರ್ಥಿಗಳು ಒಂದೆಡೆ ಸೇರುವುದು ಮಾತುಕತೆ ನಡೆಸುವುದು ಅತ್ಯಂತ ಸಂತೋಷದ ವಿಷಯವಾಗಿದ್ದು, ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ಎಲ್ಲಾ ವಿದ್ಯಾರ್ಥಿಗಳನ್ನು ಮುಂದಿನ ಕಾರ್ಯಕ್ರಮದೊಳಗಾಗಿ ತಲುಪಬೇಕಾಗಿದೆ ಎಂದರು.
ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಸಹ ನಾವೆಲ್ಲ ಒಂದೆ ಎಂಬ ಭಾವನೆ ಇರಬೇಕಾಗಿದೆ. ಕಾಲೇಜಿನ ಅಭಿವೃದ್ಧಿಗಾಗಿ ನಾನು 10 ಲಕ್ಷ ರೂಗಳನ್ನು ಈಗಾಗಲೇ ನೀಡಿದ್ದೇನೆ. ಮುಂದೆಯು ಸಹ ಸಾಮಾನ್ಯ ವಿದ್ಯಾರ್ಥಿ ಎಂದು ಭಾವಿಸಿ ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗಿಯಾಗಿ ಕಾಲೇಜಿನ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲ ಸೇಠ್ ಪ್ರಕಾಶ್, ಪ್ರಾಧ್ಯಾಪಕ ಫಾಲಾಕ್ಷಯ್ಯ, ಹಳೆ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಸುರೇಶ್, ಉಪಾಧ್ಯಕ್ಷ ವೆಂಕಟೇಶಪ್ಪ, ಖಜಾಂಚಿ ಮಲ್ಲೇಶಪ್ಪ, ಸಹಾಯಕ ಪ್ರಾಧ್ಯಾಪಕ ಡಾ.ಓ.ನಾಗರಾಜು, ಪ್ರಾಧ್ಯಾಪಕ ನಾಗಭೂಷಣ್ ಬಗ್ಗನಡು, ಎಸ್.ಎಫ್.ಐ ಜಿಲ್ಲಾಧ್ಯಕ್ಷ ಈ.ಶಿವಣ್ಣ ಮೊದಲಾದವರು ಉಪಸ್ಥಿತರಿದ್ದರು.