ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆಯನ್ನೇ ಹಾಳುಗೆಡವುತ್ತಿದ್ದಾರೆ ಎಂದು ತಿಪಟೂರು ಕಾಂಗ್ರೆಸ್ ಮುಖಂಡ ಶಶಿಧರ್ ಆರೋಪಿಸಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಸಚಿವರು ಮಕ್ಕಳ ಭವಿಷ್ಯವನ್ನೇ ಅತಂತ್ರಗೊಳಿಸುತ್ತಿದ್ದಾರೆ. ಅಪ್ರಬುದ್ಧರ ಕೈಯಲ್ಲಿ ಶಿಕ್ಷಣದಂತಹ ಮಹತ್ವದ ಇಲಾಖೆಯನ್ನು ಕೊಟ್ಟಿರುವುದು ದುರ್ದೈವದ ಸಂಗತಿಯಾಗಿದೆ ಎಂದು ಆಪಾದಿಸಿದರು.
2 ವರ್ಷ ಕೊರೋನಾದಿಂದಾಗಿ ಶಿಕ್ಷಣ ವ್ಯವಸ್ಥೆ ಹಾಳಾಯಿತು. ಈಗ ನಾಗೇಶ ಅವರಿಂದಾಗಿ ಶಿಕ್ಷಣ ವ್ಯವಸ್ಥೆಗೇ ಕೊರೋನಾ ಬಂದಂತಾಗಿದೆ. ಶಿಕ್ಷಣ ಸಚಿವರು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತ ಮಕ್ಕಳ ಭವಿಷ್ಯದೊಂದಿಗೆ ಚಲ್ಲಾಟವಾಡುತ್ತಿದ್ದಾರೆ. ತಕ್ಷಣ ಶಿಕ್ಷಣ ಇಲಾಖೆಯನ್ನು ಅವರಿಂದ ಹಿಂಪಡೆದು ಸಮರ್ಥರೊಬ್ಬರನ್ನು ನೇಮಿಸಬೇಕು ಎಂದು ಆಗ್ರಹಿಸಿದರು.
ಎಳೆಯ ಮಕ್ಕಳಲ್ಲಿ ಜಾತಿಯ ವಿಷಬೀಜ ಬಿತ್ತಲಾಗುತ್ತಿದೆ. ಶಾಲೆಗಳ ಬಣ್ಣ ಬದಲಾಯಿಸುವುದೇ ದೊಡ್ಡ ಸಾಧನೆ ಎಂದುಕೊಂಡಿದ್ದಾರೆ. ಶಿಕ್ಷಕರಿಗೂ ನೂರೆಂಟು ಕೆಲಸ ಹಚ್ಚಲಾಗುತ್ತಿದ್ದು, ಪಾಠ ಮಾಡುವುದ್ನು ಬಿಟ್ಟು ಬೇರೆ ಕೆಲಸಗಳನ್ನು ಮಾಡಬೇಕಾಗಿದೆ. ಇನ್ನು ಕೆಲವೇ ತಿಂಗಳಲ್ಲಿ ಈ ಶೈಕ್ಷಣಿಕ ವರ್ಷ ಮುಗಿಯುತ್ತಿದ್ದು ಮಕ್ಕಳ ಭವಿಷ್ಯ ನೆನಪಿಸಿಕೊಂಡರೆ ಭಯವಾಗುತ್ತದೆ ಎಂದು ಶಶಿಧರ ಹೇಳಿದರು.
ನಾನು ಗ್ರಾಸ್ ರೂಟ್ ಲೇವೆಲ್ ನಲ್ಲಿ ಕೆಲಸ ಮಾಡುತ್ತಿದ್ದೇನೆ. ಗ್ರಾಮ ಮಟ್ಟದಲ್ಲಿ ನಮ್ಮ ಪಕ್ಷ ಬಲಿಷ್ಠವಾಗಿದೆ. ಪಕ್ಷಕ್ಕಾಗಿ ಕೆಲಸ ಮಾಡುವ ಯುವಕರ ಪಡೆಯೇ ಇದೆ. ಆದರೆ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವಾಗಬೇಕಿದೆ ಎಂದರು.
ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಡ
ಚುನಾವಣೆಗೆ ನಿಲ್ಲುವಂತೆ ಎಲ್ಲೆಡೆಯಿಂದ ನನಗೆ ಒತ್ತಡಬರುತ್ತಿದೆ. ಜನರ ನಾಡಿಮಿಡಿತ ಅರಿತು ಚುನಾವಣೆಗೆ ನಿಲ್ಲುವ ನಿರ್ಧಾರಕ್ಕೆ ಬಂದಿದ್ದೇನೆ. ಈಗಾಗಲೆ ಪಕ್ಷಕ್ಕೆ ಅರ್ಜಿ ಸಲ್ಲಿಸಿದ್ದೇನೆ. ನನಗೆ ಟಿಕೆಟ್ ಸಿಗುವ ಸಂಪೂರ್ಣ ವಿಶ್ವಾಸವಿದೆ ಎಂದು ಶಶಿಧರ ತಿಳಿಸಿದರು.