ಆಪರೇಷನ್ ವೋಟರ್ ಹಗರಣವನ್ನು ಹಾಸ್ಯಾಸ್ಪದ ಎಂದು ತಳ್ಳಿಹಾಕಿರುವ ಮುಖ್ಯಮಂತ್ರಿಗಳು, ಈ ಹಗರಣದ ರೂವಾರಿಗಳನ್ನು ರಕ್ಷಿಸಲು, ಸಂಸ್ಥೆಯ ಒಬ್ಬ ಏಜೆಂಟನ ವಿರುದ್ಧ ಪೊಲೀಸರಿಂದ ಎಫ್ಐಆರ್ ಹಾಕಿಸಿ ತಮ್ಮ ಸರ್ಕಾರದ ಕೆಲಸ ಎಷ್ಟು ಹಾಸ್ಯಾಸ್ಪದ ಎನ್ನುವುದನ್ನು ಸಾಬೀತುಪಡಿಸಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗೇಲಿ ಮಾಡಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆಯ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ವಿರುದ್ಧವೇ ನಾವು ದೂರು ನೀಡಿದ್ದೆವು. ಮುಖ್ಯಮಂತ್ರಿಗಳು 20,000 ರೂಪಾಯಿ ಸಂಬಳದ ಬಡಪಾಯಿ ಏಜೆಂಟನನ್ನು ಬಲಿಪಶು ಮಾಡಿ ತಾವು ಪಾರಾಗುವ ಸಂಚು ನಡೆಸಿದ್ದಾರೆ ಎಂದು ಆರೋಪಿಸಿದರು.
ಮುಖ್ಯಮಂತ್ರಿಗಳು ತಮ್ಮನ್ನು ರಕ್ಷಿಸಿಕೊಳ್ಳಲು ಆಪರೇಷನ್ ವೋಟರ್ ಹಗರಣವನ್ನು ಜಾತಿಗಣತಿಗೆ ಹೋಲಿಸಿದ್ದಾರೆ. ಒಂದು ಸಂಸ್ಥೆಯ ಹಿನ್ನೆಲೆಯನ್ನೂ ಪರಿಶೀಲಿಸದೆ ಮತದಾರರ ಪರಿಷ್ಕರಣೆಗೆ ನೀಡಿರುವ ಅನುಮತಿಗೂ, ಸುಪ್ರೀಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ನಡೆಸಿರುವ ಜಾತಿಗಣತಿಗೂ ಏನು ಸ್ವಾಮಿ ಸಂಬಂಧ? ಎಂದು ಪ್ರಶ್ನಿಸಿದ್ದಾರೆ.
ಉಚಿತವಾಗಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಸಿರುವ ಚಿಲುಮೆ ಸಂಸ್ಥೆಯ ಹಿನ್ನೆಲೆ ಏನು? ಅದರ ಮಾಲೀಕರು ಯಾರು? ಹಣಕಾಸು ಸಾಮರ್ಥ್ಯ ಏನು? ಉದ್ಯೋಗಿಗಳ ಸಂಖ್ಯೆ ಎಷ್ಟು? ಅದರ ಹಣಕಾಸಿನ ಮೂಲ ಯಾವುದು? ಈ ಬಗ್ಗೆ ತನಿಖೆಯಾಗಲಿ ಎಂದು ಆಗ್ರಹಿಸಿದ್ದಾರೆ.
ದೂರು ಬಂದ ಕಾರಣಕ್ಕೆ ಚಿಲುಮೆಗೆ ನೀಡಿರುವ ಅನುಮತಿಯನ್ನು ಬಿಬಿಎಂಪಿ ರದ್ದುಪಡಿಸಿರುವುದನ್ನು ಸ್ವಾಗತಿಸುತ್ತೇನೆ. ಮಾಡಿರುವ ಅಪರಾಧಕ್ಕೆ ಅನುಮತಿ ರದ್ದತಿ ಶಿಕ್ಷೆ ಅಲ್ಲವಲ್ಲಾ? ಗುತ್ತಿಗೆಯನ್ನು ರದ್ದುಗೊಳಿಸುವ ಮೂಲಕ ಆಗಿರುವ ಅಪರಾಧವನ್ನು ಇಲಾಖೆಯೇ ಒಪ್ಪಿಕೊಂಡಂತಾಗಿಲ್ಲವೇ? ಎಂದು ಹೇಳಿದ್ದಾರೆ.
ಸಮಾಜ ಸೇವೆಗೆ ಬೇಕಾದಷ್ಟು ಅವಕಾಶ ಇರುವಾಗ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಉಚಿತವಾಗಿ ಮಾಡುತ್ತೇವೆ ಎಂದು ಸಂಸ್ಥೆ ಅರ್ಜಿ ನೀಡಿದಾಗಲೇ ಅದರ ಹಿಂದಿನ ದುರುದ್ದೇಶದ ಅರಿವು ಬಿಬಿಎಂಪಿಗೆ ಆಗಬೇಕಿತ್ತು. ಆಗಿಲ್ಲ ಎಂದರೆ ಬಿಬಿಎಂಪಿ ಹಗರಣದದಲ್ಲಿ ಭಾಗಿಯಾಗಿದೆ ಎಂದು ಅರ್ಥ ಅಲ್ಲವೇ? ಎಂದು ಕೇಳಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಚಿಲುಮೆ ಸಂಸ್ಥೆಗೆ ನೀಡಿರುವ ಅನುಮತಿಯನ್ನು ರದ್ದುಪಡಿಸಿದ್ದೀರಿ? ಆ ಸಂಸ್ಥೆ ಅಕ್ರಮವಾಗಿ ಸಂಗ್ರಹಿಸಿರುವ ಮಾಹಿತಿ ಏನಾಯಿತು? ಆ ಸಂಸ್ಥೆ ಬಿಬಿಎಂಪಿಗೆ ಸಲ್ಲಿಸಿದೆಯಾ? ಇಲ್ಲವೇ ಯಾವುದಾದರೂ ರಾಜಕೀಯ ಪಕ್ಷಕ್ಕೆ ಮಾರಿದೆಯಾ? ಎಂದು ಪ್ರಶ್ನೆಗಳ ಸುರಿಮಳೆಗರೆದಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆ ಎನ್ನುವುದು “ಕೆಜಿಎಫ್” ಚಿತ್ರದ ರಾಕಿಭಾಯ್ ನ ಸೇಡಿನ ಕತೆಯೂ ಅಲ್ಲ, “ಕಾಂತಾರ” ಚಿತ್ರದ ಗುಳಿಗ-ಪಂಜುರ್ಲಿಯ ದಂತಕತೆಯೂ ಅಲ್ಲ. ಯಾರು ಯಾವ ಕೆಲಸ ಮಾಡಬೇಕೋ, ಅದನ್ನೇ ಮಾಡಬೇಕು ಎಂದು ಟೀಕಿಸಿದ್ದಾರೆ.