ದೀಪಾವಳಿಯ ದಿನದಂದು ಆಯ್ದ ಕೆಲವು ಪತ್ರಕರ್ತರಿಗೆ ಸ್ವೀಟ್ ಬಾಕ್ಸ್ ಗಳ ಜೊತೆಗೆ 1 ಲಕ್ಷ ರೂಪಾಯಿ ನಗದು ಉಡುಗೊರೆ ನೀಡಿರುವುದರಲ್ಲಿ ತಮ್ಮ ಪಾತ್ರವಿಲ್ಲ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರಾಕರಿಸಿದ್ದಾರೆ.
ಈ ಕುರಿತು ಲೋಕಾಯುಕ್ತಕ್ಕೆ ಯಾರೋ ದೂರು ನೀಡಿದ್ದು, ತನಿಖೆ ನಡೆದು ಸತ್ಯ ಹೊರಬರಲಿ ಎಂದು ಹೇಳಿದ್ದಾರೆ.
ಹಬ್ಬದ ದಿನದಂದು ಪತ್ರಕರ್ತರಿಗೆ ಲಂಚ ನೀಡಲು ಯತ್ನಿಸಲಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಭ್ರಷ್ಟಾಚಾರ ಪ್ರಕರಣ ದಾಖಲಿಸಲು ಮತ್ತು ಮುಖ್ಯಮಂತ್ರಿ ರಾಜಿನಾಮೆಗೆ ಕಾಂಗ್ರೆಸ್ ಒತ್ತಾಯಿಸಿದೆ.
ಇದು ಕಾಂಗ್ರೆಸ್ ನ ಟೂಲ್ ಕಿಟ್ ಫಲಿತಾಂಶ. ಕಾಂಗ್ರೆಸ್ ಮುಖಂಡರು ಸುಳ್ಳನ್ನು ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ನಾನು ಯಾರಿಗೂ ಉಡುಗೊರೆ ನೀಡಲು ಸೂಚನೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ವಿವಿಧ ವ್ಯಕ್ತಿಗಳು ಏನೇನು ಉಡುಗೊರೆಗಳನ್ನು ನೀಡಿದ್ದರು ಎಂಬುದು ಸ್ಪಷ್ಟವಾಗಿ ಗೊತ್ತಿದ್ದು, ಅದು ಐಫೋನ್ ಅಥವಾ ಲ್ಯಾಪ್ ಟಾಪ್, ಚಿನ್ನದ ನಾಣ್ಯಗಳನ್ನು ನೀಡಲಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿದ್ದವು ಎಂದರು.
ಕಾಂಗ್ರೆಸ್ ನವರಿಗೆ ಯಾವ ನೈತಿಕತೆ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಲೋಕಾಯುಕ್ತರಿಗೆ ಈ ಬಗ್ಗೆ ಯಾರೋ ದೂರು ಕೊಟ್ಟಿದ್ದಾರೆ. ಲೋಕಾಯುಕ್ತ ತನಿಖೆ ನಡೆಸುತ್ತಾರೆ. ಗಿಫ್ಟ್ ಕೊಟ್ಟಿದ್ದಾರೆ/ಎಲ್ಲಾ ಪತ್ರಕರ್ತರು ತೆಗೆದುಕೊಂಡಿದ್ದಾರೆ ಎಂದು ವ್ಯಾಖ್ಯಾನಿಸುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.