ತಿನ್ನುವ ಆಹಾರವೂ ನಿಯಂತ್ರಣಕ್ಕೊಳಪಟ್ಟಿದೆ. ಯಾವ ಆಹಾರ ತಿನ್ನುವುದು ಎಂಬುದು ಮುಸ್ಲಿಂ ಐಡೆಂಟಿಟಿಯ ಒಂದು ಭಾಗವಾಗಿದೆ ಎಂದು ಹಿರಿಯ ಪತ್ರಕರ್ತ ಚ.ಹ.ರಘುನಾಥ್ ಆತಂಕ ವ್ಯಕ್ತಪಡಿಸಿದರು.
ತುಮಕೂರಿನ ಕನ್ನಡ ಭವನದಲ್ಲಿ ಬಹುರೂಪಿ ಬೆಂಗಳೂರು, ಕರ್ನಾಟಕ ಲೇಖಕಿಯರ ಸಂಘ ತುಮಕೂರು ಜಿಲ್ಲಾ ಶಾಖೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಕಥೆಗಾರ ಮಿರ್ಜಾ ಬಷೀರ್ ಅವರ ಗಂಗೇ ಬಾರೆ, ಗೌರಿ ಬಾರೆ ಆತ್ಮಕಥೆಯ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಯಾವ ಆಹಾರ ಸೇವಿಸಬೇಕು ಎನ್ನುವುದು ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಮಹತ್ವವನ್ನು ಪಡೆದುಕೊಳ್ಳುತ್ತಿದೆ. ದನಗಳ ಮಾಂಸ ಸೇವಿಸುವುದು, ದನಗಳನ್ನು ಸಾಗಾಟ ಮಾಡುವುದನ್ನು ಪ್ರಶ್ನಿಸುತ್ತ ಹಲ್ಲೆ ನಡೆಸುವಂತಹ ಪ್ರಸಂಗಗಳು ಬಷೀರ್ ಅವರ ಕೃತಿಯಲ್ಲಿ ದಾಖಲಾಗಿವೆ ಎಂದು ಹೇಳಿದರು.
ಅದೇ ದನಗಳಿಗೆ ಚಿಕಿತ್ಸೆ ನೀಡಿ ರಕ್ಷಿಸುವ ಕೆಲಸ ಮಾಡುವ ವ್ಯಕ್ತಿಗಳನ್ನು ಸ್ಮರಿಸುವುದಿಲ್ಲ. ಇಂತಹ ಸಂಗತಿಗಳು ಮರೆಗೆ ಸರಿಯುತ್ತವೆ. ಇದನ್ನು ಕೂಡ ಗಮನಿಸಬೇಕು ಎಂದರು. ದನಗಳ ನೆಪದಲ್ಲಿ ಜನಗಳ ಸಣ್ಣ ಸಣ್ಣ ಸಂಗತಿಗಳನ್ನು ಮಿರ್ಜಾ ಬಷೀರ್ ಕಟ್ಟಿಕೊಡುತ್ತಾರೆ ಎಂದು ತಿಳಿಸಿದರು.
ಬಹುರೂಪಿ ಮುಖ್ಯಸ್ಥ ಹಾಗೂ ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ಮಾತನಾಡಿ, ಪುಸ್ತಕಗಳನ್ನು ದ್ವೇಷಿಸುವ ಮತ್ತು ಪುಸ್ತಕಗಳು ಮುದ್ರಣವಾಗದಂತೆ ಮತ್ತು ಅವುಗಳು ಮಾರಾಟವಾಗದಂತೆ ನೋಡಿಕೊಳ್ಳುವ ಸನ್ನಿವೇಶದಲ್ಲಿ ನಾವು ಬದುಕುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಗಂಗೇ ಬಾರೆ, ಗೌರಿ ಬಾರೆ ಕೃತಿ ಬಿಡುಗಡೆಯಾಗುತ್ತಿದೆ ಎಂದರು.
ಈ ಕೃತಿ ಪ್ರತಿ ಪ್ರಾಣಿಕಯ ಆತ್ಮಕಥನ. ಮಾತನಾಡದೇ ಅತ್ಮಕಥನವಾಗಿದೆ. ಪುಸ್ತಕದಲ್ಲಿ ಗುಜ್ಜಾರ್ ಅವರ ಚಿತ್ರಗಳು ಚೆನ್ನಾಗಿ ಬಂದಿವೆ. ಕಿರಗೂರಿನ ಗೈಯ್ಯಾಳಿಗಳು, ತೇಜಸ್ವಿ ಅವರ ಎಲ್ಲಾ ಪುಸ್ತಕಗಳಿಗೆ ಚಿತ್ರಗಳನ್ನು ಬರೆದವರು ಗುಜ್ಜಾರ್ ಎಂದು ತಿಳಿಸಿದರು.
ಬಹುರೂಪಿ ಬುಕ್ ಹಬ್ ಶುರು ಮಾಡಿದ್ದೇವೆ. ದೇಶದ ಎರಡು ಮೂರು ಭಿನ್ನ ಪುಸ್ತಕ ಮಳಿಗೆಗಳಲ್ಲಿ ನಮ್ಮದು ಒಂದಾಗಿದೆ. ಹಾಗಾಗಿ ಬಹುರೂಪಿ ಬುಕ್ ಹಬ್ ಗೆ ನೀವು ಬೆಂಗಾವಲು ಆಗಿರಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಲೇಖಕಿಯರ ಸಂಘದ ರಾಜ್ಯಾಧ್ಯಕ್ಷೆ ಎಚ್.ಎಲ್.ಪುಷ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಕಲೇಸಂ ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜು, ಕಲಾವಿದ ಗುಜ್ಜಾರ್ ಮೊದಲಾದವರು ಉಪಸ್ಥಿತರಿದ್ದರು.