ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಪ್ರಮುಖವಾಗಿ 3 ಆಶಯಗಳಡಿ ನಡೆಯುತ್ತಿದೆ. ದ್ವೇಷ , ನಿರುದ್ಯೋಗ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಪ್ರಶ್ನೆಗಳನ್ನಿಟ್ಟುಕೊಂಡು ಐಕ್ಯತಾ ಹೆಜ್ಜೆ ಹಾಕತ್ತಿದ್ದಾರೆ ಎಂದು ಕೆಪಿಸಿಸಿ ಮುಖ್ಯ ವಕ್ತಾರ ಡಾ.ಸಿ.ಎಸ್.ದ್ವಾರಕನಾಥ್ ಹೇಳಿದರು.
ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿಗೆ ನೈತಿಕ ಪ್ರಜ್ಞೆಯಿದೆ. ಅವರ ಸರ್ಟಿಫಿಕೇಟ್ ಗಳು ನಕಲು ಅಲ್ಲ. ಅವರು ಸುಳ್ಳು ಹೇಳಲ್ಲ ಎಂದರು.
ಸೃಷ್ಟಿಯಲ್ಲಿ ಯಾವಾಗ ಅನ್ಯಾಯ, ಅಧರ್ಮ ಮಿತಿ ಮೀರಿ ಹೆಚ್ಚಾಗುತ್ತಿದೋ ಆಗ ನಾನು ಧರ್ಮ ರಕ್ಷಣೆಗೆ , ಶಿಷ್ಟರ ಉಳಿವಿಗೆ ಅವತಾರ ಎತ್ತಿ ಬರುತ್ತೇನೆ ಎಂದರೂ ನೆರವಿಗೆ ಯಾರೂ ಬರಲಿಲ್ಲ. ರಾಹುಲ್ ಗಾಂಧಿ ಪ್ರೀತಿಯಿಂದ ಎಲ್ಲರನ್ನೂ ಒಂದುಗೂಡಿಸುತ್ತೇನೆಂದು ಬಂದಿದ್ದಾರೆ. ದ್ವೇಷ ಬೇಡ ನಾವೆಲ್ಲಾ ಒಂದು ಎನ್ನುತ್ತಿರುವ ಅವರ ಜತೆ ಹೆಜ್ಜೆ ಹಾಕೋಣ ಎಂದು ಕರೆ ನೀಡಿದರು.
ಕಾಂಗ್ರೆಸ್ ಮಾತ್ರವಲ್ಲದೆ ಎಲ್ಲಾ ಜ್ಯಾತ್ಯತೀತ, ಸಂವಿಧಾನದಲ್ಲಿ ನಂಬಿಕೆ ಇರುವ ಪಕ್ಷಗಳು, ನೂರಾರು ಸಂಘಟನೆಗಳಿಗೆ ಆಹ್ವಾನ ನೀಡಿದ್ದೇವೆ. ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಮೂಲಭೂತ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸುವ ಬಗ್ಗೆ ಚಿಂತನೆ ಮಾಡುತ್ತಿಲ್ಲ. ಅನ್ನ, ಆರೋಗ್ಯ, ಶಿಕ್ಷಣ, ಉದ್ಯೋಗದಂತಹ ವಿಚಾರಗಳನ್ನು ಎತ್ತಿದಾಗ ಅವುಗಳನ್ನು ಮರೆಮಾಚಲು ಯಾವುದಾದರೂ ಬೇರೆ ವಿಷಯಗಳನ್ನು ಮುನ್ನೆಲೆಗೆ ತರುತ್ತವೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿದಾಗ ಅದರ ವಿರುದ್ಧದ ಧ್ವನಿ ಅಡಗಿಸಲು ವ್ಯವಸ್ಥಿತವಾಗಿ ವಿಷಯಾಂತರ ಮಾಡುತ್ತಾರೆ. ಚಿರತೆ ಕರೆದುಕೊಂಡು ಪ್ರಚಾರ ಪಡೆಯುತ್ತಾರೆ ಎಂದು ಟೀಕಾ ಪ್ರಹಾರ ನಡೆಸಿದರು.
ಹಾಲು,ಮೊಸರು ಎಲ್ಲದಕ್ಕೂ ಜಿಎಸ್ ಟಿ. ಈ ಜಿಎಸ್ ಟಿ ಹೆಸರಲ್ಲಿ ಲೂಟಿ ಮಾಡುತ್ತಿದ್ದಾರೆ. ಆ ಹಣದಲ್ಲಿ ಜನರಿಗೆ ಏನು ಕೊಡುತ್ತಾರೆ? ಆರೋಗ್ಯ, ಶಿಕ್ಷಣ , ನಿರುದ್ಯೋಗ ಯಾವ ಸಮಸ್ಯೆಯನ್ನು ಬಗೆಹರಿಸಿದ್ದಾರೆಂದು ಪ್ರಶ್ನಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತ್ರಿಯಂಬಕ, ಲೇಖಕ ಗಂಗಾಧರಯ್ಯ , ಭೂಮಿ ಕಲಾತಂಡದ ಸತೀಶ್, ಬೆಲೆ ಕಾವಲು ಸಮಿತಿಯ ಶ್ರೀಕಾಂತ್, ಯುವ ನಾಯಕ ಪುನೀತ್, ಶಂಕರ್ ಇದ್ದರು.