ಜೀವನದಲ್ಲಿ ಇನ್ನೆಂದೂ ಬಿಜೆಪಿಯನ್ನು ನಂಬುವುದಿಲ್ಲ. ನಂಬಲು ಕೂಡ ಇದು ಅನರ್ಹ ಪಕ್ಷ ಎಂದು ವಿಧಾನ ಪರಿಷತ್ ಸದಸ್ಯ ಆರ್.ಶಂಕರ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಆಕ್ರೋಶ ಹೊರಹಾಕಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕಳೆದ ರಾತ್ರಿ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರ ಪಕ್ಷದ ಮುಖಂಡರ ವಿರುದ್ಧವೇ ಬಹಿರಂಗವಾಗಿ ಆಕ್ರೋಶ ಹೊರಹಾಕಿದರು ಎಂದು ತಿಳಿದುಬಂದಿದೆ.
ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನವನ್ನು ನೀಡಲಾಗಿತ್ತು. ಅಲ್ಲಿ ನೆಮ್ಮದಿಯಾಗಿಯೂ ಇದ್ದೆ. ಆದರೆ ಬಿಜೆಪಿಯಲ್ಲಿ ಉನ್ನತ ಸ್ಥಾನ ನೀಡಲಾಗುತ್ತದೆ ಎಂದು ನಂಬಿಸಿ ಸಚಿವ ಸ್ಥಾನಕ್ಕೆ ರಾಜಿನಾಮೆಯನ್ನು ಕೊಡುವಂತಾಯಿತು. ಇದರಿಂದ ಪಕ್ಷ ವಿರೋಧಿ ಆರೋಪವನ್ನು ಹೊರಿಸಿ ಶಾಸಕ ಸ್ಥಾನವನ್ನೂ ಅನರ್ಹಗೊಳಿಸುವಂತೆ ಮಾಡಲಾಯಿತು ಎಂದು ಶಂಕರ್ ಆಪ್ತ ಮೂಲಗಳನ್ನು ಉಲ್ಲೇಖಿಸಿ ಜನಶಕ್ತಿ ಮೀಡಿಯಾ.ಕಾಂ ವರದಿ ಮಾಡಿದೆ.
ವಿಧಾನ ಪರಿಷತ್ ಸ್ಥಾನವನ್ನೂ ಕಾಡಿಬೇಡಿ ಪಡೆದುಕೊಳ್ಳುವಂತೆ ಆಯಿತು. ಸಚಿವ ಸ್ಥಾನ ಕೊಡುತ್ತಾರೆ ಎಂದು ಕಾದೆ. ಆದರೆ ನನಗೆ ಸಚಿವ ಸ್ಥಾನವನ್ನು ಕೊಡದೆ ಸತಾಯಿಸುತ್ತಿದ್ದಾರೆ. ನಿಮ್ಮನ್ನು ನಂಬಿ ಬಂದದ್ದಕ್ಕೆ ನೀವು ಕೊಡುವ ಕೊಡುಗೆ ಇದೇನಾ ಎಂದು ನೇರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರಶ್ನೆ ಮಾಡಿದರೆಂದು ತಿಳಿದುಬಂದಿದೆ.
ಶಾಸಕಾಂಗ ಪಕ್ಷದ ಸಭೆಯಲ್ಲಿ ನೇರವಾಗಿಯೇ ಕಿಡಿಕಾರಿದ ಮಾಜಿ ಸಚಿವ ಶಂಕರ್ ನೀವು ಬೇಡ, ನಿಮ್ಮ ಪಕ್ಷವೂ ಬೇಡ. ನಿಮ್ಮನ್ನು ನಂಬಿ ಬಂದಿದ್ದಕ್ಕೆ ದೊಡ್ಡ ಉಡುಗೊರೆಯನ್ನೇ ಕೊಟ್ಟಿದ್ದೀರಿ, ನಿಮ್ಮ ಸಚಿವ ಸ್ಥಾನವನ್ನು ನೀವೇ ಇಟ್ಟುಕೊಳ್ಳಿ ಎಂದು ಸಿಟ್ಟಾಗಿ ಸಭೆಯಿಂದ ಹೊರ ನಡೆದರು ಎಂದು ಮೂಲಗಳನ್ನು ಉಲ್ಲೇಖಿಸಿ ಜನಶಕ್ತಿ ಮೀಡಿಯಾ.ಕಾಂ ವರದಿಯಲ್ಲಿ ತಿಳಿಸಿದೆ.