ರಾಜ್ಯದ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ವರ್ಷ ತುಂಬಿದ್ದಕ್ಕಾಗಿ ಜನಸ್ಪಂದನ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದಕ್ಕೆ ಜನಸ್ಪಂದನ ಅಲ್ಲ ಜನ ಮರ್ದನ ಎಂದು ಹೆಸರಿಡಬೇಕಾಗಿತ್ತು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಕಳೆದ ಮೂರು ವರ್ಷಗಳ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ದುರಾಡಳಿತ ಮತ್ತು ಸುಳ್ಳು ಹೇಳಿಕೆಗಳಿಂದಾಗಿ ಜನ ಸಲುಗಿ ಹೋಗಿದ್ದಾರೆ ಎಂದು ಹೇಳಿದ್ದಾರೆ.
ಸ್ಪಂದನ ಮಾಡಲು ಜನರಿಗೆ ಆಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲಿದೆ? ವಿರೋಧ ಪಕ್ಷಗಳು ಇವರನ್ನು ಪ್ರಶ್ನೆ ಮಾಡಿದರೆ ಸಿಬಿಐ, ಇಡಿ, ಐಟಿ ದಾಳಿ ನಡೆಸಿ ಬೆದರಿಸುತ್ತಾರೆ. ನಾಗರಿಕರು ಪ್ರಶ್ನೆ ಮಾಡಿದರೆ ಸುಳ್ಳು ಕೇಸ್ ಗಳನ್ನು ಹಾಕಿ ಜೈಲಿಗೆ ಹಾಕುತ್ತಾರೆ. ಜನ ಸ್ಪಂದಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕಾಡುತ್ತಿದೆ ಎಂದು ಅವರ ಪಕ್ಷದ ಸಚಿವರು ಮತ್ತು ಶಾಸಕರು ಹೇಳುತ್ತಿದ್ದಾರೆ. ಇನ್ನೊಂದೆಡೆ ಗುತ್ತಿಗೆದಾರರ ಸಂಘ, ಶಿಕ್ಷಣ ಸಂಸ್ಥೆಗಳ ಒಕ್ಕೂಟ ನೇರವಾಗಿ ಪ್ರಧಾನಿ ಮೋದಿಗೆ ಪತ್ರ ಬರೆಯುತ್ತಿದೆ. ರಾಜ್ಯ ಹೈಕೋರ್ಟ್ ಒಂದಲ್ಲ, ಎರಡಲ್ಲ ಹಲವು ಬಾರಿ ನೇರವಾಗಿ ಭ್ರಷ್ಟಾಚಾರದ ಬಗ್ಗೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ ಎಂದು ತಿಳಿಸಿದ್ದಾರೆ.
ಭ್ರಷ್ಟಾಚಾರ ನಿಗ್ರಹ ದಳಕ್ಕೆ ಭ್ರಷ್ಟಾಚಾರವೇ ದಂಧೆಯಾಗಿದೆ. ಸ್ವಯಂ ಸಿಸಿಬಿಯೇ ಅತೀ ದೊಡ್ಡ ಭ್ರಷ್ಟರ ಕೂಪವಾಗಿದೆ. ಅದರ ಮುಖ್ಯಸ್ಥ ಎಡಿಜಿಪಿಯೇ ಕಳಂಕಿತ ಅಧಿಕಾರಿ. ಎಸಿಬಿ ಕಚೇರಿಯೇ ಕಲೆಕ್ಷನ್ ಸೆಂಟರ್ ಆಗಿವೆ ಎಂದು ಹೇಳಿದ್ದು ನಾವಲ್ಲ ರಾಜ್ಯ ಹೈಕೋರ್ಟ್ ನ್ಯಾಯಾಧೀಶರು ಎಂದು ಹೇಳಿದ್ದಾರೆ.
ಹೈಕಮಾಂಡ್ ಗೆ 2000 ಕೋಟಿ ರೂಪಾಯಿ ಕೊಟ್ಟು ಮುಖ್ಯಮಂತ್ರಿಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿಗಳ ಮಗ ಲಂಚ ಹೊಡೆಯುತ್ತಿದ್ದಾರೆ ಎಂದು ಹೇಳುತ್ತಿರುವುದು ಅವರದ್ದೇ ಪಕ್ಷದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಎಂದು ಆರೋಪಿಸಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಯಲ್ಲಿ 2 ಸಾವಿರ ಕೋಟಿ ಕಿಕ್ ಬ್ಯಾಕ್ ಪಡೆಯಲಾಗಿದೆ ಎಂದು ಮೊದಲ ಬಾರಿಗೆ ಇಡೀ ರಾಜ್ಯಕ್ಕೆ ಹೇಳಿದವರು ಬಿಜೆಪಿ ಪಕ್ಷದ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್. ಮುಖ್ಯಮಂತ್ರಿ ಯಡಿರಯೂರಪ್ಪನವರು ಮತ್ತು ಮತ್ತವರ ಮಕ್ಕಳು ನನ್ನ ಖಾತೆಯಲ್ಲಿ ಕೈ ಆಡಿಸುತ್ತಿದ್ದಾರೆ ಎಂದು 2021ರ ಮಾರ್ಚ್ ನಲ್ಲಿ ರಾಜ್ಯಪಾಲರಿಗೆ ದೂರು ನೀಡಿದ್ದು ಕೆ.ಎಸ್.ಈಶ್ವರಪ್ಪ ಎಂದು ಉದಾಹರಣೆ ಸಹಿತ ವಿವರಿಸಿದರು.