ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸದಾ ಉತ್ತರ ಪ್ರದೇಶ ಮಾಡೆಲ್ ತರುವುದಾಗಿ ಹೇಳುತ್ತಿದ್ದರು. ಈಗ ಮಹದೇವಪುರ, ಬೊಮ್ಮನಹಳ್ಳಿ ಸೇರಿದಂತೆ ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲಿ ಸಂಪೂರ್ಣವಾಗಿ ಮೂಲಭೂತ ಸೌಕರ್ಯ ಕುಸಿದಿದೆ. ಬೆಂಗಳೂರಿನ ಇತಿಹಾಸದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಜನರನ್ನು ಸಾಗಿಸಲು ಟ್ರ್ಯಾಕ್ಟರ್ ಬಳಸಿರಲಿಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ವ್ಯಂಗ್ಯವಾಡಿದ್ದಾರೆ.
ಈ ಮಳೆಯ ಮೂಲಕ ಬಿಜೆಪಿ ಸರ್ಕಾರ ಈ ರಾಜ್ಯವನ್ನು ಹಾಗೂ ಬೆಂಗಳೂರಿನ ಆಡಳಿತ ನಡೆಸಲು ತಾವುಗಳು ಯೋಗ್ಯರಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಬೆಂಗಳೂರಿನಲ್ಲಿ ಭಾರೀ ಮಳೆ ಬರುವುದು ಹೊಸತಲ್ಲ. ಕಾಂಗ್ರೆಸ್ ಸರ್ಕಾರ ಇದ್ದಾಗ ರಸ್ತೆಗಳ ಪಕ್ಕದಲ್ಲಿ ಚರಂಡಿ ಮಾಡುತ್ತಿದ್ದರು. ಬಿಜೆಪಿ ಬಂದಮೇಲೆ ರಸ್ತೆಗಳ ಮೇಲೆ ಬಿಜೆಪಿಯವರು ಚರಂಡಿ ಮಾಡಿದ್ದಾರೆ ಎಂಬುದು ಮಳೆಯ ಮೂಲಕ ತಿಳಿದಿದೆ ಎಂದಿದ್ದಾರೆ.
ವಿಶ್ವದಲ್ಲೇ ಖ್ಯಾತಿ ಪಡೆದಿರುವ ಐಟಿ-ಬಿಟಿ ಕಂಪನಿಗಳು ಇರುವ ಪ್ರದೇಶಗಳಲ್ಲಿ ಯಾವುದೇ ಮೂಲಭೂತ ಸೌಕರ್ಯವನ್ನು ಈ ಸರ್ಕಾರ ನೀಡಿಲ್ಲ. ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್ ಅಪ್ ನಗರ, ದೇಶಕ್ಕೆ ಅತಿ ಹೆಚ್ಚು ತೆರಿಗೆ ನೀಡುವ ಬೆಂಗಳೂರು ನಗರಕ್ಕೆ ಸರ್ಕಾರ ಮಲತಾಯಿ ಧೋರಣೆ ಮಾಡುತ್ತಿರುವುದು ನೋಡಿದರೆ ಉತ್ತರ ಪ್ರದೇಶ ಮಾಡೆಲ್ ಜಾರಿ ಆಗುತ್ತಿರುವುದು ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
ಇನ್ನು ಈ ಭಾಗದ ಶಾಸಕರ ವರ್ತನೆ ನೋಡಿದರೆ ಇವರು ಅಭಿವೃದ್ಧಿ ಕಡೆ ಯೋಚಿಸುವವರಲ್ಲ ಎಂಬುದು ತಿಳಿಯುತ್ತದೆ. ಬಿಬಿಎಂಪಿ ಚುನಾವಣೆ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕಿತ್ತು. ಅದನ್ನು ಮಾಡಿಲ್ಲ. ಮುಖ್ಯಮಂತ್ರಿಗಳು ಮೋದಿ ಹಾಗೂ ಶಾ ಅವರಿಗೆ 40 ರಷ್ಟು ಕಮಿಷನ್ ಹಣ ರವಾನಿಸುತ್ತಿದ್ದು ನನಗೆ ಯಾವ ತೊಂದರೆ ಇಲ್ಲ ಎಂದು ನಿಶ್ಚಿಂತತೆಯಿಂದ ಇದ್ದಾರೆ ಎಂದರು.
ಜನರ ದುಡ್ಡಲ್ಲಿ 40 ರಷ್ಟು ಕಮಿಷನ್ ಹೊಡೆದರೆ ಬೆಂಗಳೂರು ತತ್ತರಿಸುತ್ತದೆ ಎಂಬುದಕ್ಕೆ ಇದೇ ಸಾಕ್ಷಿ. ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಇಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಕೇವಲ ಐಟಿ-ಬಿಟಿ ಕ್ಷೇತ್ರದಲ್ಲಿ ಮಾತ್ರ ಈ ಪರಿಸ್ಥಿತಿ ಇಲ್ಲ. ಬೆಂಗಳೂರಿನ 600 ಗುಡಿಸಲು ಪ್ರದೇಶಗಳಲ್ಲಿ ಜನ ತತ್ತರಿಸಿದ್ದು ಕುಡಿಯಲು ನೀರಿಲ್ಲ. ತಿನ್ನಲು ಅನ್ನವಿಲ್ಲದೆ ಪರದಾಡುತ್ತಿದ್ದಾರೆ. ಆದರೂ ಸರ್ಕಾರ ಮೂಕ ಪ್ರೇಕ್ಷಕರಾಗಿ ನೋಡುತ್ತಿದೆ. ಅಭಿವೃದ್ಧಿ ಮಾಡುವ ಸಂಸ್ಥೆಗಳಿಗೂ ಯಾವುದೇ ಸೌಲಭ್ಯ ನೀಡುವುದಿಲ್ಲ ಎಂಬ ಮನಸ್ಥಿತಿಗೆ ಸರ್ಕಾರ ಬಂದಿದೆ ಎಂದು ದೂರಿದರು.