Thursday, November 21, 2024
Google search engine
Homeಮುಖಪುಟತುಮಕೂರು ವಿವಿಯಲ್ಲಿ ಸಾವರ್ಕರ್ ಅಧ್ಯಯನ ಪೀಠ ಸ್ಥಾಪಿಸಿದರೆ ತೀವ್ರ ಹೋರಾಟ

ತುಮಕೂರು ವಿವಿಯಲ್ಲಿ ಸಾವರ್ಕರ್ ಅಧ್ಯಯನ ಪೀಠ ಸ್ಥಾಪಿಸಿದರೆ ತೀವ್ರ ಹೋರಾಟ

ತುಮಕೂರು ವಿವಿಯಲ್ಲಿ ಸಾರ್ವಕರ್ ಅಧ್ಯಯನ ಪೀಠ ಸ್ಥಾಪನೆ ವಿರೋಧಿಸಿ ಎಸ್.ಎಫ್.ಐ ಮತ್ತು ಪ್ರಗತಿಪರ ಸಂಘಟನೆಗಳು ಸೆಪ್ಟೆಂಬರ್ ೨ರಂದು ಕುಲಪತಿ ವೆಂಕಟೇಶ್ವರಲು ಅವರನ್ನು ಭೇಟಿ ಮಾಡಿ ಸಾವರ್ಕರ್ ಅಧ್ಯಯನ ಪೀಠ ಸ್ಥಾಪಿಸಿದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿವೆ.

ಈಗಾಗಲೇ ಎರಡು ಬಾರಿ ಕುಲಪತಿಗಳಿಗೆ ಮನವಿ ಸಲ್ಲಿಸಿರುವ ಎಸ್‌ಎಫ್‌ಐ ಮತ್ತು ಪ್ರಗತಿಪರ ಸಂಘಟನೆಗಳು ಅನವಶ್ಯಕವಾಗಿ ಸಾವರ್ಕರ್ ಅಧ್ಯಯನ ಪೀಠ ಸ್ಥಾಪಿಸಿದರೆ ನಿರಂತರ ಹೋರಾಟ ನಡೆಸಲಾಗುವುದು. ಬ್ರಿಟಿಷರಿಗೆ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟ ಸಾವರ್ಕರ್ ಅಧ್ಯಯನ ಪೀಠದಿಂದ ಯಾವುದೇ ಪ್ರಯೋಜನವಿಲ್ಲ ಎಂದು ಸಂಘಟನೆಗಳು ಹೇಳಿವೆ.

ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆಗೆ ವಿರೋಧ ವ್ಯಕ್ತವಾಗುತ್ತಿರುವುದನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಜೊತೆಗೆ ತುಮಕೂರು ವಿವಿಯಲ್ಲಿ ವಿದ್ಯಾರ್ಥಿ ವಿರೋಧಿಯಾದ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ವಿದ್ಯಾರ್ಥಿ ವಿರೋಧಿ ಪೀಠಗಳನ್ನು ವಿವಿಯಲ್ಲಿ ಜಾರಿಗೊಳಿಸುವುದಿಲ್ಲ ಎಂದು ಎಸ್.ಎಫ್.ಐ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರ ನಿಯೋಗಕ್ಕೆ ಭರವಸೆ ನೀಡಿದರು.

ವಿವಿಯು ಸಾವರ್ಕರ್ ಅಧ್ಯಯನ ಪೀಠದಿಂದ ಹಿಂದೆ ಸರಿಯದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು. ವಿಶ್ವವಿದ್ಯಾಲಯದಲ್ಲಿ ಯಾವುದೇ ಕಾರಣಕ್ಕೂ ವಿಷಬೀಜ ಬಿತ್ತಲು ಬಿಡುವುದಿಲ್ಲ. ಜಾತ್ಯತೀತ ಮೌಲ್ಯಗಳಿಗಾಗಿ ವಿವಿಯು ಹೆಚ್ಚು ಗಮನಹರಿಸಬೇಕು. ಹಾಲಿ ಇರುವ ಸಿಂಡಿಕೇಟ್ ಸದಸ್ಯರು ವಿವಿಯ ಕ್ಯಾಂಪಸ್ ನಿರ್ಮಾಣಕ್ಕಾಗಿ ಮತ್ತು ಇರುವ ಅಧ್ಯಯನ ಪೀಠಗಳ ಅಭಿವೃದ್ಧಿ ಹೆಚ್ಚು ಗಮನಹರಿಸಬೇಕಾಗಿದೆ. ಅನಗತ್ಯವಾಗಿ ವಿದ್ಯಾರ್ಥಿಗಳಿಗೆ ಅಗತ್ಯವಿಲ್ಲದ ವಿಚಾರಗಳನ್ನು ಕೈಬಿಡಬೇಕು ಎಂದು ನಿಯೋಗದಲ್ಲಿದ್ದ ಮುಖಂಡರು ಆಗ್ರಹಿಸಿದರು.

ಕುಲಪತಿಗಳು ಸಾವರ್ಕರ್ ಪೀಠಕ್ಕೆ ಯಾವುದೇ ಕಾರಣಕ್ಕೂ ಮುಂದಾಗಬಾರದು. ಒಂದು ವೇಳೆ ಪೀಠ ಸ್ಥಾಪಿಸಿದರೆೆ ನಾಲ್ಕು ವರ್ಷಗಳ ಕಾಲ ನಿರಂತರ ಹೋರಾಟಗಳು ಮುಂದುವರಿಯಲಿವೆ ಎಂದು ಎಚ್ಚರಿಕೆ ನೀಡಿದರು.

ಸಾವರ್ಕರ್ ಬಗ್ಗೆ ಅಧ್ಯಯನ ಮಾಡಲು ಸಮಾಜಕ್ಕೆ ಬೇಕಾಗುವಂತಹ ಯಾವುದೇ ವಿಚಾರಗಳು ಇರುವುದಿಲ್ಲ. ಆದ್ದರಿಂದ ವಿವಿಯಲ್ಲಿ ಅನಗತ್ಯವಾದ ಚರ್ಚೆ ಮಾಡಬಾರದು. ಕುಲಪತಿಗಳು ಮತ್ತು ಸಿಂಡಿಕೇಟ್ ಸಮಿತಿ ವಿವಿಯ ಅಭಿವೃದ್ಧಿ ಕಡೆ ಗಮನಹರಿಸಬೇಕು. ಯಾವುದೇ ಕಾರಣಕ್ಕೂ ಸಾವರ್ಕರ್ ಪೀಠವನ್ನು ಸ್ಥಾಪನೆ ಮಾಡಬಾರದು ಎಂದು ಹೇಳಿದರು.

ಹಾಲಿ ಇರುವ ೧೪ ಪೀಠಗಳಿಗೆ ಇದುವರೆಗೂ ಸಂಶೋಧನೆ ನಡೆಸಲು ಒಬ್ಬೇ ಒಬ್ಬ ವಿದ್ಯಾರ್ಥಿಗೂ ವಿವಿಯು ಅವಕಾಶ ನೀಡಿಲ್ಲ. ಇಂತಹ ಸಂದರ್ಭದಲ್ಲಿ ಅನಗತ್ಯವಾಗಿ ಸಮಾಜ ವಿರೋಧಿಗಳನ್ನು ವಿವಿಯಲ್ಲಿ ಪರಿಚಯಿಸುವುದು ಬೇಡ. ವಿವಿಗಳು ವಿಚಾರ ವಿನಿಮಯ ಕೇಂದ್ರಗಳಾಗಬೇಕು. ಬದಲಾಗಿ ಸಾವರ್ಕರ್ ಅವರಂತಹ ದೇಶವಿರೋಧಿ ಕೇಂದ್ರಗಳಾಗಬಾರದು. ಯಾವುದೇ ಕಾರಣಕ್ಕೂ ವಿವಿಯಲ್ಲಿ ಇವರ ಸಾವರ್ಕರ್ ಅಧ್ಯಯನ ಪೀಠ ಅಗತ್ಯವಿಲ್ಲ ಎಂದರು.

ಸಭೆಯಲ್ಲಿ ಎಸ್.ಯು.ಸಿಐ ಮುಖಂಡ ಎಸ್.ಎನ್. ಸ್ವಾಮಿ, ಭಾರತೀಯ ಶರಣ ಸೇನಾ ಜಿಲ್ಲಾಧ್ಯಕ್ಷ ರವಿಕುಮಾರ ರಾಯಸಂದ್ರ, ಎಸ್.ಎಫ್.ಐ ಜಿಲ್ಲಾಧ್ಯಕ್ಷ ಈ.ಶಿವಣ್ಣ, ಮಾಜಿ ಸಿಂಡಿಕೇಟ್ ಸದಸ್ಯ ಕೊಟ್ಟ ಶಂಕರ್, ಜಿ.ಕೆ.ನಾಗಣ್ಣ, ಎಐಡಿಎಸ್‌ಓ ಕಲ್ಯಾಣಿ, ಬಿಎಸ್‌ಪಿ ಜಿಲ್ಲಾ ಕಾರ್ಯದರ್ಶಿ ರಂಗಧಾಮಯ್ಯ, ತುಮಕೂರು ಜಿಲ್ಲಾ ಪ್ರಗತಿಪರ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಮೇಶ್, ದಲಿತ ವಿದ್ಯಾರ್ಥಿ ಪರಿಷತ್ ಅಜಿತ್ ಕುಮಾರ್ ಇತರರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular