ರಾಷ್ಟ್ರಪತಿ ಚುನಾವಣೆಯ ಮತದಾನ ಸೋಮವಾರ ಸಂಸತ್ ಭವನ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ನಡೆದಿದ್ದು, ಶೇ.99.18 ರಷ್ಟು ಮತ ಚಲಾವಣೆಯಾಗಿದೆ.
ಸೋಮವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ದೇಶಾದ್ಯಂತ ಮುಖ್ಯಮಂತ್ರಿಗಳು, ಸಂಸದರು, ಶಾಸಕರು ಮತ ಚಲಾಯಿಸಿದರು.
ಭಾರತದ 15ನೇ ರಾಷ್ಟ್ರಪತಿಯನ್ನು ಆಯ್ಕೆ ಮಾಡಲು ಸುಮಾರು 4800 ಸಂಸದರು ಮತ್ತು ಶಾಸಕರು ಸಂಜೆ 5 ಗಂಟೆಯವರೆಗೆ ಮತ ಚಲಾಯಿಸಿದ್ದಾರೆ. ಜುಲೈ 21ರಂದು ಮತ ಎಣಿಕೆ ನಡೆಯಲಿದ್ದು, ಜುಲೈ 25ರಂದು ಮುಂದಿನ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಸೋಮವಾರ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದ ಪ್ರತಿಪಕ್ಷಗಳ ನಾಮನಿರ್ದೇಶಿತ ಯಶವಂತ್ ಸಿನ್ಹಾ ಈ ಚುನಾವಣೆಯು ಬಹಳ ಮಹತ್ವದ್ದಾಗಿದೆ ಎಂದು ನಾನು ಪದೇಪದೇ ಹೇಳುತ್ತಿದ್ದೇನೆ. ಏಕೆಂದರೆ ಇದು ಭಾರತದಲ್ಲಿ ಪ್ರಜಾಪ್ರಭುತ್ವ ಉಳಿಯುತ್ತದೆಯೇ ಅಥವಾ ನಿಧಾನವಾಗಿ ಕೊನೆಗೊಳ್ಳುತ್ತದೆಯೇ ಎಂಬ ದಿಕ್ಕನ್ನು ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.
ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಸಿನ್ಹಾ ಅವರೊಂದಿಗೆ ಹೋರಾಟವಿದೆ. ಮುರ್ಮು ಪರವಾಗಿ 60ರಷ್ಟು ಪ್ರತಿಶತ ಮತಗಳು ಚಲಾವಣೆಯಾಗುವ ನಿರೀಕ್ಷೆಯಿದೆ. ಅವರಿಗೆ ಬಿಜೆಡಿ, ವೈಎಸ್ಆರ್.ಸಿಪಿ, ಬಿಎಸ್,ಪಿ, ಎಐಎಡಿಎಂಕೆ, ಟಿಡಿಪಿ, ಜೆಡಿಎಸ್, ಶಿರೋಮಣಿ ಅಕಾಲಿದಳ, ಶಿವಸೇನೆ ಮತ್ತು ಜೆಎಂಎಂ ಬೆಂಬಲವಿದೆ. ಚುನಾಯಿತರಾದರೆ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿದ ದೇಶದ ಬುಡಕಟ್ಟು ಸಮುದಾಯದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.