ಕುಮಾರಸ್ವಾಮಿ ದೊಡ್ಡವರು, ಅವರು ಮೇಕೆದಾಟು ಯೋಜನೆ ಬಗ್ಗೆ ಯಾವಾಗ ಎಲ್ಲೆಲ್ಲಿ ಹೋರಾಟ ಮಾಡಿದ್ದಾರೋ ನನಗೆ ಗೊತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಕುಮಾರ್, ಮೇಕೆದಾಟು ಯೋಜನೆ ಹೈಜಾಕ್ ಮಾಡಿದ್ದೇನೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಅವರು ಹೋರಾಟ ಮಾಡಿದ್ದು ಗೊತ್ತಿಲ್ಲ ಎಂದು ಹೇಳಿದರು.
ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ತೀರ್ಮಾನಿಸಿ ಮುಂದಾಳತ್ವ ವಹಿಸಿ, ಪಕ್ಷಾತೀತವಾಗಿ ಹೋರಾಟ ಮಾಡುತ್ತಿದೆ. ಕುಮಾರಸ್ವಾಮಿ ಅವರು ಸದನದಲ್ಲಿ ನಾನು ಈ ಹೋರಾಟ ಮಾಡಬೇಕು ಎಂದು ಭಾವಿಸಿದ್ದೆ, ಈ ಹೋರಾಟಕ್ಕೆ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದಾರೆ. ಹೀಗಾಗಿ ಈ ಹೋರಾಟಕ್ಕೆ ಅವರಿಂದ ಯಾವುದೇ ತಕರಾರು ಇಲ್ಲ ಎಂದರು.

ಈ ಯೋಜನೆ ಕರ್ನಾಟಕದ್ದು, ಇದಕ್ಕೆ ತಮಿಳುನಾಡಿನ ಒಂದು ಇಂಚು ಭೂಮಿ, ಒಂದು ರೂ. ಹಣ ಬೇಕಾಗಿಲ್ಲ. ನಮ್ಮ ನೀರು, ನಮ್ಮ ಹಕ್ಕು, ನಮ್ಮ ಯೋಜನೆ. ಆದರೆ ಅವರಿಗೆ ಸೇರಬೇಕಾದ ನೀರಿಗೆ ತೊಂದರೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
400 ಮೆ.ವ್ಯಾ. ವಿದ್ಯುತ್ ಉತ್ಪಾದನೆ, ಕುಡಿಯುವ ನೀರು, ಕಾವೇರಿ ಜಲಾನಯನ ಪ್ರದೇಶಕ್ಕೆ ಕಷ್ಟ ಕಾಲದಲ್ಲಿ ನ್ಯಾಯ ಒದಗಿಸಲು ಈ ಯೋಜನೆ ಮಾಡಲೇಬೇಕು. ಈ ಯೋಜನೆಗೆ ಇರುವ ಸಮಸ್ಯೆ ಬಗೆಹರಿಸಲು ಒಂದೇ ದಿನ ಸಾಕು. ಆದರೆ ರಾಜ್ಯ ಸರ್ಕಾರ ಇದುವರೆಗೂ ಈ ವಿಚಾರವಾಗಿ ಕೇಂದ್ರದ ಜತೆ ಸಭೆ ಮಾಡಿಲ್ಲ ಎಂದು ದೂರಿದರು.
ಹೀಗಾಗಿ ಬರುವ ಜನವರಿ 9 ಮೇಕೆದಾಟಿನಿಂದ ಬೆಂಗಳೂರುವರೆಗೂ ಜನರಲ್ಲಿ ಜಾಗೃತಿ ಮೂಡಿಸಲು 10 ದಿನಗಳ ಕಾಲ ಪಾದಯಾತ್ರೆ ನಡೆಸುತ್ತಿದ್ದೇವೆ. ಇದು ಪಕ್ಷಾತೀತ ಹೋರಾಟವಾಗಿದೆ ಎಂದು ತಿಳಿಸಿದರು.
ಮತಾಂತರ ನಿಷೇಧ ಕಾಯ್ದೆ ತರುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್ ನಾವು ಹೇಳಬೇಕಾದ, ಚರ್ಚಿಸಬೇಕಾಗಿದ್ದನ್ನು ಮಾಡಿದ್ದೇವೆ. ಅವರು ರಾಜಕೀಯ ಉದ್ದೇಶದಿಂದ ಇದನ್ನು ತರುತ್ತಿದ್ದಾರೆ. ಜ.5 ರ ನಂತರ ಮೇಲ್ಮನೆಯಲ್ಲಿ ತಮಗೆ ಬಹುಮತ ಬರಲಿದೆ. ಕಾಂಗ್ರೆಸ್ ಪಕ್ಷದ ನಿಲುವು ಈಗಾಗಲೇ ಹೇಳಿದ್ದೇವೆ. ಈ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ ಎಂದರು.


