ತುಮಕೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲಿ ಬರದನಾಡು ಪಾವಗಡ ತಾಲ್ಲೂಕನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಒಬ್ಬೇ ಒಬ್ಬರಿಗೂ ಪ್ರಶಸ್ತಿಯನ್ನು ನೀಡದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡುವಲ್ಲಿ ಪ್ರಶಸ್ತಿ ಆಯ್ಕೆ ಸಮಿತಿ ಮತ್ತು ಜಿಲ್ಲಾಡಳಿತ ಅನ್ಯಾಯವೆಸಗಿದೆ. ಗಡಿ ಪ್ರದೇಶವಾದ ಪಾವಗಡ ತಾಲ್ಲೂಕು ತುಮಕೂರು ಜಿಲ್ಲೆ ವ್ಯಾಪ್ತಿಗೆ ಸೇರಿದ್ದರೂ ಪ್ರಶಸ್ತಿಗೆ ಒಬ್ಬರನ್ನೂ ಪರಿಗಣಿಸದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಪಾವಗಡ ತಾಲ್ಲೂಕಿನಲ್ಲಿ ಸಾಹಿತ್ಯ, ಪಾರಂಪರಿಕ ವೈದ್ಯ, ಜಾನಪದ, ಕಲೆ ಮತ್ತು ಸಂಸ್ಕೃತಿ, ರಂಗಭೂಮಿ, ಸಮಾಜಸೇವೆ, ಕೃಷಿ, ಸಾವಯವ ಕೃಷಿ, ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಹಲವು ಮಂದಿ ಸಾಧಕರಿದ್ದಾರೆ. ಆದರೂ ಆಯ್ಕೆ ಸಮಿತಿ ಪಾವಗಡ ತಾಲ್ಲೂಕಿನ ಸಾಧಕರನ್ನು ಗುರುತಿಸುವಲ್ಲಿ ನಿರ್ಲಕ್ಷ್ಯ ತೋರಿದೆ.
ಕನ್ನಡ ರಾಜ್ಯೋತ್ಸವ ಪ್ರಶಶ್ತಿ ಆಯ್ಕೆಯಲ್ಲಿ ತುಮಕೂರು ನಗರ ಮತ್ತು ತಾಲ್ಲೂಕಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಹೀಗಾಗಿ ಪ್ರಶಸ್ತಿ ಆಯ್ಕೆಯಲ್ಲಿ ಸಮತೋಲನ ಕಾಯ್ದುಕೊಳ್ಳುವಲ್ಲಿ ಆಯ್ಕೆ ಸಮಿತಿ ಎಡವಿದೆ.
ನಂಜುಂಡಪ್ಪ ವರದಿಯ ಪ್ರಕಾರ ಪಾವಗಡ ತಾಲ್ಲೂಕು ಅತಿ ಹಿಂದುಳಿದ ತಾಲ್ಲೂಕಾಗಿದೆ. ಮೂರು ಕಡೆಯೂ ಆಂದ್ರಗಡಿಗೆ ಹೊಂದಿಕೊಂಡಿರುವುದರಿಂದ ಪಾವಗಡ ಪರ್ಯಾಯ ದ್ವೀಪದಂತಿದೆ. ಇಂತಹ ಸಂದರ್ಭದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡುವಲ್ಲೂ ಅನ್ಯಾಯ ಮಾಡಲಾಗಿದೆ.
ಪ್ರಶಸ್ತಿ ಆಯ್ಕೆಯಲ್ಲಿ ಸಾಮಾಜಿಕ ನ್ಯಾಯವನ್ನು ಪಾಲಿಸಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಗಡಿನಾಡಿಗೆ ಹಚ್ಚಿನ ಆದ್ಯತೆ ನೀಡಬೇಕಿತ್ತು. ಆಯ್ಕೆ ಸಮಿತಿ ಪಾವಗಡ ತಾಲ್ಲೂಕನ್ನು ನಿರ್ಲಕ್ಷಿಸಿರುವುದು ಪ್ರಶಸ್ತಿ ಆಯ್ಕೆ ಪಟ್ಟಿಯಲ್ಲಿ ಎದ್ದು ಕಾಣುತ್ತದೆ.