ಪೂರ್ಣಿಮಾ ಮತ್ತು ಶ್ರೀನಿವಾಸ್ ಸಾಮಾಜಿಕ ನ್ಯಾಯದ ಪರವಾಗಿರುವವರು. ಒಲ್ಲದ ಮನಸ್ಸಿನಿಂದ ಬಿಜೆಪಿಯಲ್ಲಿದ್ದರು. ಈಗ ಕಾಂಗ್ರೆಸ್ ಗೆ ಬಂದಿದ್ದಾರೆ. ಇವರಿಗೆ ರಾಜಕೀಯವಾಗಿ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಪೂರ್ಣಿಮ ಮತ್ತು ಪತಿ ಶ್ರೀನಿವಾಸ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಅವರು ಮಾತನಾಡಿದರು.
ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳ ಪರವಾಗಿರುವ ಏಕೈಕ ರಾಷ್ಟ್ರೀಯ ಪಕ್ಷ ನಮ್ಮ ಕಾಂಗ್ರೆಸ್. ಸಾಮಾಜಿಕ ನ್ಯಾಯದಿಂದ ವಂಚಿತರಾದವರ ಧ್ವನಿಯಾಗಿ ಎ.ಕೃಷ್ಣಪ್ಪ, ಪೂರ್ಣಿಮಾ ಮತ್ತು ಶ್ರೀನಿವಾಸ್ ಮೊದಲಿನಿಂದಲೂ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟುಕೊಂಡಿರುವ ಪಕ್ಷ. ಬಿಜೆಪಿ ಜಾತಿ ತಾರತಮ್ಯದಲ್ಲಿ ನಂಬಿಕೆ ಇಟ್ಟುಕೊಂಡಿರುವ ಪಕ್ಷ. ಎಲ್ಲಾ ಜಾತಿಯ ಬಡವರು ಮತ್ತು ಶೂದ್ರ ಸಮುದಾಯದವರು ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡು ರಾಜಕೀಯ ನಿಲುವು ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಪೂರ್ಣಿಮಾ, ಶ್ರೀನಿವಾಸ್ ಮತ್ತು ಇವರ ಬೆಂಬಲಿಗರಿಗೆ ಬಿಜೆಪಿಯಲ್ಲಿ ಸಾಮಾಜಿಕ ನ್ಯಾಯ ಇಲ್ಲ ಎನ್ನುವುದು ಸ್ಪಷ್ಟವಾಗಿ ಮನದಟ್ಟಾಗಿದೆ. ಬಿಜೆಪಿಯಲ್ಲಿ ಸಾಮಾಜಿಕ ನ್ಯಾಯದ ಪರವಾಗಿ ನಿಲುವು ಇಟ್ಟುಕೊಂಡಿರುವವರಿಗೆ ಬಹಳ ಕಷ್ಟ ಎನ್ನುವುದು ಇವರನ್ನು ನೋಡಿದಾಗ ಸ್ಪಷ್ಟವಾಗಿದೆ. ಅದಕ್ಕೇ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಹಿಂದುಳಿದ ಸಮುದಾಯಗಳು ಇಂದು ಕಾಂಗ್ರೆಸ್ ಸೇರುತ್ತಿದ್ದಾರೆ.
ಸುಳ್ಳು ಬಿಜೆಪಿಯ ಮನೆ ದೇವರು. ಸುಳ್ಳುಗಳ ಮೂಲಕ ಜನರನ್ನು ಯಾಮಾರಿಸಿ, ದಿಕ್ಕು ತಪ್ಪಿಸಿ, ಹಾದಿ ತಪ್ಪಿಸಿ ಕೆಟ್ಟ ರಾಜಕಾರಣ ಮಾಡುತ್ತದೆ. ಅಧಿಕಾರಿ ಇದ್ದಾಗಲೂ ಸುಳ್ಳು, ಅಧಿಕಾರ ಇಲ್ಲದಿದ್ದಾಗಲೂ ಸುಳ್ಳುಗಳ ಮೇಲೆ ಅವಲಂಬನೆಯಾಗಿರುತ್ತದೆ. ನಿಮ್ಮ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ನಿಮ್ಮನ್ನೇ ಯಾಮಾರಿಸುವವರನ್ನು ಈ ಕ್ಷಣದಿಂದಲೇ ತಿರಸ್ಕರಿಸಿ.
ಪೂರ್ಣಿಮಾ ಶ್ರೀನಿವಾಸ್
ನಮ್ಮ ಕುಟುಂಬವನ್ನು ಎ.ಕೃಷ್ಣಪ್ಪ ಅವರ ಕುಟುಂಬ ಎಂದು ಗುರುತಿಸುತ್ತಾರೆ. ನನ್ನನ್ನು ಕಾಂಗ್ರೆಸ್ ಕೃಷ್ಣಪ್ಪ ಅವರ ಮಗಳು ಎಂದು ಗುರುತಿಸುತ್ತಾರೆ. ಎಲ್ಲರ ಅಪೇಕ್ಷೆ ಮೇರೆಗೆ ಇಂದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿದ್ದೇನೆ ಎಂದು ಮಾಜಿ ಶಾಸಕಿ ಪೂರ್ಣಿಮಾ ಹೇಳಿದರು.
ನಾನು ಸಿದ್ಧಾಂತ ಒಪ್ಪಿ ಇಂದು ಕಾಂಗ್ರೆಸ್ ಸೇರಿದ್ದೇನೆ. ಅನೇಕರು ನನಗೆ ನಿನ್ನಲ್ಲಿ ಇನ್ನು ಕಾಂಗ್ರೆಸ್ ರಕ್ತವಿದೆ ಎಂದು ಹೇಳುತ್ತಿದ್ದರು. ಅದೇ ನನ್ನನ್ನು ಇಂದು ಮತ್ತೆ ಕಾಂಗ್ರೆಸ್ ಪಕ್ಷದತ್ತ ಕರೆತಂದಿದೆ. ನಾವು ಎಲ್ಲಿ ಕೆಲಸ ಮಾಡುತ್ತೇವೋ ಅಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ನಮ್ಮ ತಂದೆ ನನಗೆ ಹೇಳಿಕೊಟ್ಟಿದ್ದಾರೆ. ಅವರು ನನಗೆ ದೇವರಾಜ ಅರಸು, ಕೆ.ಎಚ್ ಪಾಟೀಲ್ ನಸೀರ್, ಸಿದ್ದರಾಮಯ್ಯ ಅವರ ವಿಚಾರಗಳನ್ನು ಹೇಳುತ್ತಿದ್ದರು. ಅದನ್ನು ನಾನು ಕೇಳಿ ಬೆಳದವಳು. ಅದರಿಂದ ಪ್ರೇರಿತಳಾಗಿ ನಾನು ರಾಜಕೀಯದತ್ತ ಮುಖ ಮಾಡಿದ್ದೇನೆ ಎಂದು ತಿಳಿಸಿದರು.
ಡಿ.ಟಿ.ಶ್ರೀನಿವಾಸ್:
ನಾವು ಇಂದು ಪಕ್ಷಕ್ಕೆ ಮರಳಿದ್ದೇವೆ. ನಮ್ಮದು ದೊಡ್ಡ ಬೇಡಿಕೆಗಳಿಲ್ಲ. ಸರ್ಕಾರ ನಮ್ಮೊಂದಿಗೆ ಇದೆ. ಹಟ್ಟಿಗಳಲ್ಲಿ ವಾಸ ಮಾಡುವ ನನ್ನ ಸಮಾಜವನ್ನು ಎಸ್ಟಿ ವಿಭಾಗಕ್ಕೆ ಸೇರಿಸಲು ಕೇಂದ್ರಕ್ಕೆ ಮೊದಲು ಪ್ರಸ್ತಾವನೆ ರವಾನಿಸಿದವರು ಇಲ್ಲಿ ಕೂತಿದ್ದಾರೆ. ಕುಲಶಾಸ್ತ್ರೀಯ ಅಧ್ಯಯನ ಆಗಿ ಕೇಂದ್ರದಲ್ಲಿ ಈ ಪ್ರಸ್ತಾವನೆ ಇದೆ. ನಾನು ಇದನ್ನು ಒಂದು ಹಂತಕ್ಕೆ ತೆಗೆದುಕೊಂಡು ಹೋಗುವ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಇದು ರಾಜ್ಯದ ವ್ಯಾಪ್ತಿ ಮೀರಿ ಕೇಂದ್ರದ ಬಳಿ ಇದೆ. ಇತ್ತೀಚೆಗೆ ಅನೇಕ ಸಮಾಜಗಳ ಕುಲಶಾಸ್ತ್ರೀಯ ಅಧ್ಯಯನವಾಗಿ ಕೇಂದ್ರಕ್ಕೆ ರವಾನೆಯಾಗುತ್ತಿದೆ ಎಂದು ಡಿ.ಟಿ.ಶ್ರೀನಿವಾಸ್ ತಿಳಿಸಿದರು.
ಕನಿಷ್ಠ ಜೀವನ ನಡೆಸುತ್ತಿರುವ ಪ್ರವರ್ಗ 1ರಲ್ಲಿ ಅಲೆಮಾರಿ ಜೀವನ ನಡೆಸುತ್ತಿರುವ 46 ಸಮುದಾಯಗಳು ಗೊಲ್ಲ, ದೊಂಬಿದಾಸ, ಶಿಳ್ಳಕ್ಯಾತ, ಜೋಗಿ ಸಮಾಜಗಳ ಸಂಘಟನೆ ಮಾಡಿಕೊಂಡು ರಾಜ್ಯವನ್ನು ಸುತ್ತಿದ್ದೇನೆ. ನಮ್ಮನ್ನು ಅನೇಕರು ಟೀಕೆ ಮಾಡುತ್ತಾರೆ. ಸಮಾಜದ ಒಂದು ಭಾಗದ ಕುಲಶಾಸ್ತ್ರಿಯ ಅಧ್ಯಯನ ಕೇಂದ್ರವನ್ನು ಸೇರಿದೆ. ಮತ್ತೊಂದು ಭಾಗ ಹಂದಿಗೊಲ್ಲರು, ಹಾವಾಡಿಗಗೊಲ್ಲ, ಕೊಲಿ ಬಸವ ಸಮುದಾಯಗಳ ಪ್ರಸ್ತಾವನೆ ಕೇಂದ್ರಕ್ಕೆ ಹೋಗಬೇಕಿದೆ ಎಂದರು.