ಪ್ರೀತಿಸಿ ವಿವಾಹವಾಗಿದ್ದ ಹೆಂಡತಿಯನ್ನೇ ಕೊಲೆ ಮಾಡಿರುವ ಘಟನೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆ ಮಾಡಿದ ಆರೋಪಿ ಮಂಜುನಾಥನನ್ನು ಪೊಲೀಸರು ಬಂಧಿಸಿದ್ದಾರೆ.
ತುಮಕೂರು ತಾಲ್ಲೂಕಿನ ಮಲ್ಲಸಂದ್ರದಲ್ಲಿ ಪ್ರೀತಿಸಿ ವಿವಾಹವಾಗಿದ್ದ ಮಂಜುನಾಥ್ ತನ್ನ ಪತ್ನಿ ವಾಣಿಶ್ರೀ ಅವರನ್ನು ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.
ಕಳೆದ ಮೂರು ದಿನಗಳ ಹಿಂದೆ ಸಂಶಯಾಸ್ಪದ ರೀತಿಯಲ್ಲಿ ವಾಣಿಶ್ರೀ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ವಾಣಿಶ್ರೀ ಪೋಷಕರು ಪತಿಯಿಂದಲೇ ಮಗಳ ಕೊಲೆಯಾಗಿದೆ ಎಂದು ಆರೋಪಿಸಿ ತುಮಕೂರು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪತಿ ಮಂಜುನಾಥ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ವಿಷಯ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಹೆಗ್ಗೆರೆಯ ವಾಣಿಶ್ರೀ ಪ್ರೌಢಶಾಲೆ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ವಾಣಿಶ್ರೀ ಅವರನ್ನು ಆಸ್ಪತ್ರೆಗೆ ತೋರಿಸಿ ಚಿಕಿತ್ಸೆ ಕೊಡಿಸಲು ಸಾಧ್ಯವಾಗದೆ ಮಂಜುನಾಥ ಈ ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.