ಒಡಿಶಾದ ಬಾಲಸೂರ್ ನಲ್ಲಿ ಮೂರು ರೈಲುಗಳು ಅಪಘಾತವಾದ ಸ್ಥಳದಲ್ಲಿ ರೈಲ್ವೆ ಹಳಿಗಳನ್ನು ಸರಿಪಡಿಸುವ ಕೆಲಸ ಭರದಿಂದ ಸಾಗಿದೆ ಎಂದು ಮಾಹಿತಿ ನೀಡಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರೈಲು ದುರಂತಕ್ಕೆ ಎಲೆಕ್ಟ್ರಾನಿಕ್ ಇಂಟರ್ ಲಾಕಿಂಗ್ ಬದಲಾವಣೆಯೇ ಕಾರಣ ಆಗಿದ್ದು, 288 ಮಂದಿ ಪ್ರಾಣ ಕಳೆದುಕೊಳ್ಳುವಂತಾಯಿತು ಎಂದು ಹೇಳಿದ್ದಾರೆ.
ಎರಡು ಪ್ಯಾಸೆಂಜರ್ ರೈಲುಗಳು ಮತ್ತು ಗೂಡ್ಸ್ ಕ್ಯಾರೇಜ್ ಒಳಗೊಂಡಿರುವ ಬಾಲಸೋರ್ ರೈಲು ದುರಂತದಲ್ಲಿ ಇದುವರೆಗೆ 288 ಮಂದಿ ಸಾವನ್ನಪ್ಪಿದ್ದು, 1 ಸಾವಿರಕ್ಕೂ ಹೆಚ್ಚ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.
ರೈಲ್ವೆ ಸುರಕ್ಷತಾ ಆಯುಕ್ತರು ಈ ಬಗ್ಗೆ ತನಿಖೆ ನಡೆಸಿದ್ದು, ಘಟನೆಗೆ ಕಾರಣ ಮತ್ತು ಅದಕ್ಕೆ ಕಾರಣರಾದವರನ್ನು ಗುರುತಿಸಿದ್ದಾರೆ ಎಂದು ವೈಷ್ಣವ್ ಹೇಳಿದ್ದಾರೆ.
ರೈಲ್ವೆ ಸುರಕ್ಷತಾ ಆಯುಕ್ತರು ಈ ಬಗ್ಗೆ ತನಿಖೆ ನಡೆಸಿದ್ದಾರೆ ಮತ್ತು ತನಿಖಾ ವರದಿ ಬರಬೇಕು. ಆದರೂ ನಾವು ಘಟನೆಯ ಕಾರಣ ಮತ್ತು ಅದಕ್ಕೆ ಕಾರಣರಾದವರನ್ನು ಗುರುತಿಸಿದ್ದೇವೆ. ಎಲೆಕ್ಟ್ರಾನಿಕ್ ಇಂಟರ್ ಲಾಕಿಂಗ್ ನಲ್ಲಿನ ಬದಲಾವಣೆಯಿಂದ ಈ ದುರಂತ ಸಂಭವಿಸಿದೆ ಎಂದು ಎಎನ್ಐಗೆ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಸ್ಥಳವನ್ನು ಪರಿಶೀಲಿಸಿದರು. ನಾವು ಇಂದು ಹಳಿಯನ್ನು ಪುನರ್ ಸ್ಥಾಪಿಸಲು ಪ್ರಯತ್ನಿಸುತ್ತೇವೆ. ಎಲ್ಲಾ ಮೃತ ದೇಹಗಳನ್ನು ತೆಗೆದುಹಾಕಲಾಗಿದೆ. ಬುಧವಾರ ಬೆಳಗ್ಗೆ ಪುನಃಸ್ಥಾಪನೆ ಕಾರ್ಯವನ್ನು ಪೂರ್ಣಗೊಳಿಸುವುದು ನಮ್ಮ ಗುರಿಯಾಗಿದೆ ಎಂದಿದ್ದಾರೆ.