ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಮತ್ತು ಯುವನಿಧಿ ಯೋಜನೆಗಳನ್ನು ಕೆಲ ಷರತ್ತುಗಳೊಂದಿಗೆ ಜಾರಿಗೊಳಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನ ವಿಧಾನಸೌಧದಲ್ಲಿ ಸಂಪುಟಸಭೆ ಮುಗಿಸಿ ಹೊರಬಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಸಂಪುಟ ಸಭೆಯಲ್ಲೇ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಹೀಗಾಗಿ ಎಲ್ಲಾ 5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಗೃಹಜ್ಯೋತಿ:
ಈ ಯೋಜನೆಯಡಿ 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುತ್ತೇವೆ. ವಾರ್ಷಿಕ ಸರಾಸರಿ ತೆಗೆದುಕೊಂಡು ಅದರ ಮೇಲೆ 10ರಷ್ಟು ವಿದ್ಯುತ್ ಹೆಚ್ಚುವರಿಯಾಗಿ ನೀಡಿದರೆ ಅದು 199 ಯೂನಿಟ್ ಗಳವರೆಗೆ ಇದ್ದರೆ ಉಚಿತ ವಿದ್ಯುತ್ ನೀಡುತ್ತೇವೆ. 200 ಯೂನಿಟ್ ವರೆಗೆ ಬಿಲ್ ಕೊಡಬೇಕಾಗಿಲ್ಲ. ಇದು ಜುಲೈ 1ರಿಂದ ಜಾರಿಗೆ ಬರುತ್ತದೆ ಎಂದು ಹೇಳಿದ್ದಾರೆ.
ಗೃಹಲಕ್ಷ್ಮಿ
ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಲು ಸಂಪುಟಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದಕ್ಕೆ ಕೆಲ ಷರತ್ತುಗಳನ್ನು ವಿಧಿಸಿದ್ದು, ಮನೆಯ ಯಜಮಾನಿಯ ಅಕೌಂಟ್ ಗೆ 2000 ರೂ ಹಣ ಜಮಾ ಮಾಡುತ್ತೇವೆ. ಈ ಯೋಜನೆಯ ಲಾಭ ಪಡೆಯಲು ಜೂನ್ 10 ರಿಂದ ಜುಲೈ 15ರವರೆಗೆ ಅರ್ಜಿ ಸಲ್ಲಿಸಬೇಕು. ಬ್ಯಾಂಕ್ ಅಕೌಂಟ್, ಆಧಾರ್ ಲಿಂಕ್ ಮಾಡಿಸಬೇಕು. ಇದಕ್ಕಾಗಿ ಸಾಫ್ಟ್ ವೇರ್ ಸಿದ್ದಪಡಿಸಬೇಕು. ಹಾಗಾಗಿ ಸ್ವಲ್ಪ ಸಮಯ ಬೇಕಾಗಿದೆ. ಆಗಸ್ಟ್ 15ರಂದು ಈ ಯೋಜನೆ ಚಾಲ್ತಿಗೆ ಬರಲಿದೆ. ಇದನ್ನು ಜಾತ್ಯತೀತವಾಗಿ ಜಾರಿಗೊಳಿಸುತ್ತೇವೆ ಎಂದು ತಿಳಿಸಿದರು.
ಅನ್ನಭಾಗ್ಯ:
ಅನ್ನಭಾಗ್ಯ ಯೋಜನೆಯಡಿ ಪ್ರತಿಯೊಬ್ಬ ಸದಸ್ಯರಿಗೆ 10 ಕೆಜಿ ಆಹಾರಧಾನ್ಯಗಳನ್ನು ನೀಡಲಾಗುವುದು. ಈಗ ಆಹಾರ ಧಾನ್ಯಗಳ ಸಂಗ್ರಹ ಕಡಿಮೆ ಇರುವುದರಿಂದ ಜುಲೈ 1 ರಿಂದ ಬಿಪಿಎಲ್ ಕಾರ್ಡುದಾರರು, ಅಂತ್ಯೋದಯ ಅನ್ನ ಯೋಜನೆಯ ಅರ್ಹ ಫಲಾನುಭವಿಗಳಿಗೆ ಆಹಾರ ಧಾನ್ಯಗಳನ್ನು ನೀಡುತ್ತೇವೆ. ಅಂತ್ಯೋದಯ ಕಾರ್ಡುದಾರರು ಈಗ 35 ಕೆಜಿ ಅಕ್ಕಿ ಪಡೆಯುತ್ತಿದ್ದರೂ ಅವರಿಗೂ 10 ಅಕ್ಕಿ ನೀಡುತ್ತೇವೆ ಎಂದರು.
ಮಹಿಳಾ ಶಕ್ತಿ:
ಮಹಿಳೆಯರು ರಾಜ್ಯದೊಳಗೆ ಸರ್ಕಾರಿ ಬಸ್ ಗಳಲ್ಲಿ ಎಲ್ಲಿಗೇ ಪ್ರಯಾಣ ಮಾಡಿದರೂ ಉಚಿತವಾಗಿದೆ. ಐರಾವತ, ಲಗ್ಜುರಿ ಬಸ್ ಗಳನ್ನು ಹೊರತುಪಡಿಸಿ ಕೆ.ಎಸ್.ಆರ್.ಟಿ.ಸಿ, ಬಿಎಂಟಿಸಿ ಬಸ್ ಗಳಲ್ಲಿ ಎಲ್ಲಾ ಮಹಿಳೆಯರು ಉಚಿತ ಪ್ರಯಾಣ ಮಾಡಬಹುದು. ಈ ಯೋಜನೆ ಯನ್ನು ಜೂನ್ 11ರಂದು ಉದ್ಘಾಟಿಸುತ್ತೇವೆ. ಬಿಎಂಟಿಸಿ ಬಸ್ ನಲ್ಲಿ ಶೇ 50:50ರ ಪ್ರಮಾಣದಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಆಸನ ಮೀಸಲಾಗಿರಿಸಲಾಗುವುದು ಎಂದರು.
ಯುವನಿಧಿ:
ಯುವ ನಿಧಿ ಯೋಜನೆಯಡಿ ನಿರುದ್ಯೋಗಿಗಳಿಗೆ ಪ್ರಿತಿ ತಿಂಗಳು 3 ಸಾವಿರ ರೂ ಮತ್ತು ಡಿಪ್ಲಮೋ ಪದವಿಧರರಿಗೆ 1500 ರೂಗಳನ್ನು ಎರಡು ವರ್ಷ ನೀಡಲಾಗುವುದು. 2022-23 ನೇ ಸಾಲಿನಲ್ಲಿ ಬಿ.ಎ., ಬಿಎಸ್ ಸಿ, ಬಿಕಾಂ, ಎಂ.ಎ., ಎಂಎಸ್ ಸಿ, ಎಂಕಾಂ, ಬಿಸಿಎ ಪದವಿ ಪಡೆದ ಪದವೀಧರರಿಗೆ ಪ್ರತಿ ತಿಂಗಳು 3 ಸಾವಿರ ರೂ ನಿರುದ್ಯೋಗ ಭತ್ಯೆ ನೀಡಲಾಗುವುದು. ಇದಕ್ಕಾಗಿ ಅರ್ಜಿ ಹಾಕಬೇಕು. ಅರ್ಜಿ ಸಲ್ಲಿಸಿದ ದಿನದಿಂದ 2 ವರ್ಷಗಳವೆರೆಗೆ ನಿರುದ್ಯೋಗ ಭತ್ಯೆ ದೊರೆಯಲಿದೆ ಎಂದು ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ರಾಮಲಿಂಗಾರೆಡ್ಡಿ, ಡಾ.ಜಿ.ಪರಮೇಶ್ವರ್, ಹೆಚ್.ಕೆ.ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.


