ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಅವರೊಂದಿಗೆ ಚರ್ಚೆ ನಡೆಸಿದ ಬಳಿಕ ಎಐಸಿಸಿ ಅಧ್ಯಕ್ಷರ ಸಮ್ಮುಖದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಒಗ್ಗಟ್ಟು ಪ್ರದರ್ಶಿಸಿದರು.
ಖರ್ಗೆ ಅವರು ತಮ್ಮ ನಿವಾಸದಿಂದ ಹೊರಗೆ ಬಂದ ನಂತರ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವೆ ನಿಂತು ಉಭಯ ನಾಯಕರ ಕೈಗಳನ್ನು ಮೇಲಕ್ಕೆ ಎತ್ತುವ ಮೂಲಕ ಒಗ್ಗಟ್ಟಿನಿಂದ ಮುನ್ನಡೆಯಬೇಕೆಂಬ ಸಂದೇಶವನ್ನು ಸಾರಿದರು.
ಕನ್ನಡಿಗರ ಹಿತ ರಕ್ಷಣೆಗೆ ನಮ್ಮ ಕೈಗಳು ಸದಾ ಒಂದಾಗಿರಲಿದೆ ಎಂದು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಸಿದ್ದರಾಮಯ್ಯ ತಿಳಿಸಿದ್ದಾರೆ.
ಜನಪರ, ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಜೊತೆಗೆ ನಮ್ಮ ಎಲ್ಲಾ ಗ್ಯಾರೆಂಟಿಗಳನ್ನು ಈಡೇರಿಸಲು ಕಾಂಗ್ರೆಸ್ ಪಕ್ಷ ಒಂದು ಕುಟುಂಬವಾಗಿ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದ್ದಾರೆ.
ಕರ್ನಾಟಕದ ಸುರಕ್ಷಿತ ಭವಿಷ್ಯ ಮತ್ತು ಕನ್ನಡಿಗರ ಶ್ರೇಯೋಭಿವೃದ್ಧಿ ನಮ್ಮ ಪ್ರಮುಖ ಆದ್ಯತೆ ನೀಡುತ್ತೇವೆ. ಅದನ್ನು ಖಾತರಿಪಡಿಸುವಲ್ಲಿ ನಾವು ಒಗ್ಗಟ್ಟಾಗಿದ್ದೇವೆ ಎಂದು ಡಿಸಿಎಂ ಆಗಿ ಆಯ್ಕೆಯಾಗಿರುವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.