ಸೋಲಿನ ಭೀತಿಯಿಂದಾಗಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಕುಂದರನಹಳ್ಳಿ ರಮೇಶ್ ತುಮಕೂರು ನಗರ ಅಭ್ಯರ್ಥಿ ಪರ ನಡೆಸುತ್ತಿರುವ ಹಣ ಹಂಚಿಕೆ ನಾಚಿಕೆಗೇಡಿನ ಕೆಲಸ. ಸ್ಮಾರ್ಟ್ ಸಿಟಿ ಯೋಜನೆ, ಟ್ರಾನ್ಸಫರ್ ದಂಧೆ, ಕಾಮಗಾರಿ ಕಮಿಷನ್ ನಿಂದ ಲೂಟಿ ಮಾಡಿದ ಹಣ ಹಂಚಿಕೆ ಮಾಡುತ್ತಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಸೊಗಡು ಶಿವಣ್ಣ ಆರೋಪಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಮಾಣಿಕ ಬಿಜೆಪಿ ಕಾರ್ಯಕರ್ತರು ಇದಕ್ಕೆ ಒಪ್ಪದ ಕಾರಣ ಬೇರೆ ಬೇರೆ ಪೇಮೆಂಟ್ ಕಾರ್ಯಕರ್ತರನ್ನು ಬಳಸಿಕೊಂಡು ಹಣ ಹಂಚಿಕೆ ದಂಧೆ ನಡೆಸುತ್ತಿದ್ದಾರೆ ಎಂದು ದೂರಿದರು.
ಈ ಹಿಂದೆ ಬಿಜೆಪಿ ಧುರೀಣರನ್ನು ಬೈಯ್ಯುತ್ತಿದ್ದ ಇವರು ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದು ಅಧಿಕಾರ, ಹಣ ದಾಹಕ್ಕೆ ಪಕ್ಷದ ಮರ್ಯಾದೆ ಹರಾಜು ಮಾಡುತ್ತಿರುವುದು ವಿಪರ್ಯಾಸ. ಸಿಐಟಿ ಕಾಲೇಜಿನ ಪ್ರಜ್ಞಾವಂತ ಉಪನ್ಯಾಸಕರು-ವಿದ್ಯಾವಂತ ಸಿಬ್ಬಂದಿಯನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವುದು ವಿಷಾದನೀಯ ಎಂದು ಹೇಳಿದರು.
ಸಿಎನ್‌ವಿ ಕಂಫರ್ಟ್ಸ್‌ನಲ್ಲಿ ಸಿಐಟಿ ಕಾಲೇಜು ಹೆಸರಿನಲ್ಲಿ 25, 26 ಮತ್ತು 27 ನಂಬರಿನ ಕೊಠಡಿಯನ್ನು ಮೇ 3ರಂದು 2023ರಂದು ಕಾಯ್ದಿರಿಸಿಕೊಂಡು ದಿನೇ ದಿನೇ ಹಣ ಶೇಖರಿಸಿಟ್ಟಿದ್ದು, ಈಗ ಹಂಚುವಾಗ ಸಿಕ್ಕಿ ಬಿದ್ದು, ಮಾಹಿತಿ ನೀಡಿದವರ ಮೇಲೆಯೇ ಚುನಾವಣಾ ಆಯೋಗ ಮತ್ತು ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿರುವುದು ಶೋಭೆ ತರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಲಾಡ್ಜ್‌ನಲ್ಲಿ ಕೊಠಡಿಗಳನ್ನು ಕಾಯ್ದಿರಿಸಿದವರು ಯಾರು ಹಾಗೂ ಹಣ ಸಂದಾಯ ಮಾಡಿದವರು ಯಾರು ಎಂಬುದನ್ನು ತನಿಖೆಗೆ ಒಳಪಡಿಸಬೇಕಾಗಿದೆ. ಕುಂದರನಹಳ್ಳಿ ರಮೇಶ್ ನನ್ನ ಮೇಲೆ ಹಲ್ಲೆ ಮಾಡಿ ಕೇವಲ 23,000 ರೂ. ದರೋಡೆಯಾಗಿದೆ ಎಂದು ಹೇಳಿರುವುದು ಅರ್ಥಹೀನ. ಅವರು ಲಾಡ್ಜ್‌ನಲ್ಲಿ ಇದ್ದುದಕ್ಕೆ ಕಾರಣವೇನು ಎಂಬುದರ ಬಗ್ಗೆ ವಿಚಾರಣೆ ನಡೆಸಬೇಕಾಗಿದೆ ಎಂದರು.
ಕುಂದರನಹಳ್ಳಿ ರಮೇಶ್ ಹಲ್ಲೆಯಾಗಿರುವುದು 1.30 ಗಂಟೆಗೆ ಎಂದು ದೂರಿನಲ್ಲಿ ಹೇಳಿ 3.15 ಗಂಟೆಗೆ ದೂರು ದಾಖಲಿಸಿರುವುದು ಅನುಮಾನಕ್ಕೆ ಎಡೆ ಮಾಡಿದೆ. ಇವರ ಹತ್ತಿರ ಲಾಡ್ಜ್‌ನಲ್ಲಿ ಹಲವಾರು ಕೋಟಿಗಳಿದ್ದ ಈ ಹಣವನ್ನು ಸಾಗಿಸಲು ಪೂರಕವಾಗಿ ಕಾಲಾವಕಾಶ ತೆಗೆದುಕೊಂಡು ದೂರು ದಾಖಲಿಸಲು ವಿಳಂಬ ಮಾಡಿರುವುದಾಗಿ ತಿಳಿದು ಬಂದಿದ್ದು, ಚುನಾವಣಾ ವಿಚಕ್ಷಣ ದಳ ಸಹ ಇವರಿಗೆ ಬೆಂಬಲ ನೀಡಿರಬಹುದೆಂದು ಅಲ್ಲಿನ ಜನತೆಯೇ ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ಲಾಡ್ಜ್ ಹತ್ತಿರ ಕಾರು ಇದ್ದು, ಅದನ್ನು ಉಪಯೋಗಿಸಿದ್ದಾರೆ ಎಂಬ ಮಾಹಿತಿ ಜನಜನಿತವಾಗಿದೆ. ಆರ್‌ಟಿಓ ಮುಖಾಂತರ ಈ ಕಾರಿನ ಮಾಹಿತಿ ಸಂಗ್ರಹಿಸಿದಲ್ಲಿ ಸತ್ಯಾಂಶ ಹೊರಬೀಳಬಹುದು. ಎನ್‌ಇಪಿಎಸ್ ಪೊಲೀಸ್ ಠಾಣೆಯಲ್ಲಿ ಬೆಳಿಗ್ಗೆ 7.20 ರಿಂದ 7.35 ರವರೆಗೆ ಲೋಕಸಭಾ ಸದಸ್ಯರು, ವಕೀಲ ಎಂ.ಎಂ. ಮಲ್ಲಿಕಾರ್ಜುನಯ್ಯ ಹಾಗೂ ಕುಂದರನಹಳ್ಳಿ ರಮೇಶ್ ಇವರು ಇದ್ದಿದ್ದು ಈ ಪ್ರಕರಣದಲ್ಲಿ ರಾಜಕೀಯ ಪ್ರವೇಶ ಬೆರೆಸಿದಂತಾಗಿದೆ ಎಂದು ಆಪಾದಿಸಿದರು.
ಈ ಸಮಯದಲ್ಲಿ ನಗರಪಾಲಿಕೆ ಉಪಾಧ್ಯಕ್ಷ ನರಸಿಂಹಮೂರ್ತಿ ಹಾಗೂ ಜೆಡಿಎಸ್ ಮುಖಂಡ ರವೀಶ್ ಜಹಂಗೀರ್ ಠಾಣೆಗೆ ಪ್ರವೇಶ ಕೋರಿದ್ದು, ಅವರನ್ನು ಒಳಗಡೆ ಬಿಡದಂತೆ ತಡೆಹಿಡಿದ ಕಾರಣ ತಿಳಿಯುತ್ತಿಲ್ಲ ಎಂದು ಹೇಳಿದರು.
ಲಾಡ್ಜ್‌ನಲ್ಲಿ ಹಣ ದೊರೆತಾಗ ಚುನಾವಣಾ ಆಯೋಗದ ಅಧಿಕಾರಿಗಳು ಭೇಟಿ ನೀಡಿಲ್ಲ, ಈ ಬಗ್ಗೆಯೂ ಕಾರಣ ಗೊತ್ತಾಗುತ್ತಿಲ್ಲ. ತುಮಕೂರು ಲೋಕಸಭಾ ಸದಸ್ಯರು ರಾಜಕೀಯಕ್ಕೆ ಬಂದಾಗಿಲಿಂದಲೂ ಬ್ರಿಟೀಷರಂತೆ ಒಡೆದು ಆಳುವ ನೀತಿಯನ್ನು ಅನುಸರಿಸಿ ಎಲ್ಲ ಸಮಾಜವನ್ನೂ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಹಣ ಇಬ್ಭಾಗ ಮಾಡುತ್ತಿದ್ದಾರೆ. ಹಣ ಕೊಟ್ಟು ಖರೀದಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಮಾಧ್ಯಮಗೋಷ್ಠಿಯಲ್ಲಿ ಮುಖಂಡರಾದ ಧನಿಯಾ ಕುಮಾರ್, ಜೆ ಕೆ ಅನಿಲ್, ಜಯರಾಮ್, ಗೋಕುಲ್ ಮಂಜುನಾಥ್, ಎಸ್ ಆರ್ ಶ್ರೀಧರ ಮೂರ್ತಿ, ಕೆ ಪಿ ಮಹೇಶ್, ಸಂಜಯ್ ನಾಯ್ಕ್ ಮೊದಲಾದವರು ಇದ್ದರು.