ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಅವರಿಗೆ ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ಇರಲು ನಿರ್ಧರಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎರಡು ಜೋಳಿಗೆ ಹಿಡಿದು 1ಕ್ಕೆ ಓಟು 1ಕ್ಕೆ ನೋಟು ಎಂಬ ಧ್ಯೇಯದೊಂದಿಗೆ ನಗರದಾದ್ಯಂತ ಮತಭಿಕ್ಷೆ ಬೇಡುವ ಮೂಲಕ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತದ ವಿರುದ್ಧ ಹೋರಾಟ ಮಾಡಲು ಜೈಲಿಗೆ ಹೋಗಲು ಸಿದ್ದ ಎಂದರು.
ಶಾಸಕನಾಗಿ, ಸಚಿವನಾಗಿ 40 ವರ್ಷದ ರಾಜಕೀಯ ಜೀವನದಲ್ಲಿ ತಾನು ಮಾಡಿದ ಅಭಿವೃದ್ಧಿ ಕೆಲಸಗಳ ಕರಪತ್ರಗಳನ್ನು ಮುದ್ರಿಸಿ ಮನೆ ಮನೆಗೆ ಅದನ್ನು ಹಂಚಿ ಮತ ಕೇಳುತ್ತಿದ್ದೇನೆ. ಈ ಹೋರಾಟ ಬಿಜೆಪಿ ಪಕ್ಷದ ವಿರುದ್ಧವಲ್ಲ. ನನಗೆ ಟಿಕೆಟ್ ಕೈತಪ್ಪಲು ಕಾರಣವಾದವರ ವಿರುದ್ಧ ಎಂದು ಹೇಳಿದರು.
ಏಪ್ರಿಲ್ 20ರಂದು ನಾಮಪತ್ರ ಸಲ್ಲಿಸುತ್ತೇನೆ. ಎಲ್ಲಾ ಪಕ್ಷದಲ್ಲೂ ನನಗೆ ಸ್ನೇಹಿತರಿದ್ದಾರೆ. ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿ ಮಾತನಾಡಿದ್ದೇನೆ. ಅವರು ಸಹ ನನ್ನನ್ನು ಪಕ್ಷಕ್ಕೆ ಬರುವಂತೆ ಆಹ್ವಾನಿಸಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದರು.
ಸ್ವಾಭಿಮಾನಿ, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನನಗೆ ಎಲ್ಲರ ಆಶೀರ್ವಾದ, ಸಹಾಯ, ಸಹಕಾರ ಅಗತ್ಯವೆಂದರು. ಸಿದ್ದಗಂಗಾ ಮಠದ ಲಿಂಗೈಕ್ಯ ಶ್ರೀಗಳು ಜೋಳಿಗೆ ಹಿಡಿದು ಭಿಕ್ಷೆ ಬೇಡಿ ಮಠವನ್ನು ಬೆಳೆಸಿದ ರೀತಿ ನನಗೆ ಮಾದರಿಯಾಗಿದೆ. ಅವರ ಹಾದಿಯಲ್ಲಿ ನಾನು ಸಾಗುತ್ತಿದ್ದೇನೆ. ಮತಭಿಕ್ಷೆಗಾಗಿ ಜೋಳಿಗೆ ಹಿಡಿದಿದ್ದೇನೆ ಎಂದು ತಿಳಿಸಿದರು.