ಮಾಜಿ ಶಾಸಕ ಡಾ.ರಫೀಕ್ ಅಹಮದ್ ಅವರಿಗೆ ಟಿಕೆಟ್ ನೀಡದೇ ಇರುವುದರಿಂದ ಬೇಸರಗೊಂಡು ಈಗಾಗಲೇ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಪತ್ರವನ್ನು ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಕಳುಹಿಸಿದ್ದೇನೆ ಎಂದು ಮಾಜಿ ಶಾಸಕ ಷಫಿ ಅಹಮದ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜಿನಾಮೆ ಪತ್ರವನ್ನು ವರಿಷ್ಠರಿಗೆ ಕಳಿಸಿದ್ದೇನೆ. ನಾಳೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸಭೆ ಸೇರಿ ನಿರ್ಣಯ ತೆಗೆದುಕೊಂಡು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಒಂದೆರಡು ದಿನಗಳಲ್ಲಿ ಪಕ್ಷದ ವರಿಷ್ಠರನ್ನು ನೇರವಾಗಿ ಭೇಟಿ ಮಾಡಿ ರಾಜಿನಾಮೆ ಸಲ್ಲಿಸುತ್ತೇನೆ. ಅದಕ್ಕೂ ಮೊದಲು ತುಮಕೂರು ಜಿಲ್ಲೆಯ ಪ್ರಮುಖ ಮುಖಂಡರ ಸಭೆ ಕರೆಯಲಾಗುವುದು. ಮುಂದೆ ಯಾವ ರೀತಿಯ ನಿರ್ಣಯವನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ತುಮಕೂರು ನಗರಕ್ಕೆ ಈ ಬಾರಿ ಡಾ.ರಫೀಕ್ ಅಹಮದ್ ಅವರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಪಕ್ಷ ವಿಫಲವಾಗಿದ್ದು ಮಾಜಿ ಉಪಮುಖ್ಯಮಂತ್ರಿ ಡಾ,ಜಿ.ಪರಮೇಶ್ವರ್ ನಮಗೆ ಟಿಕೆಟ್ ನೀಡುವ ವಿಚಾರದಲ್ಲಿ ವಿಶ್ವಾಸ ದ್ರೋಹ ಎಸಗಿದ್ದಾರೆ ಎಂದು ಆರೋಪಿಸಿದರು.
ಇಂದೇ ಪಕ್ಷದ ಮುಖಂಡರ ಸಭೆಯನ್ನು ಷಫಿ ಅಹಮದ್ ಕರೆದಿದ್ದರು. ಅವರ ಸಮಕಾಲಿನರಾದ ಕೆಲ ಮುಖಂಡರು ಸಭೆಗೆ ಹಾಜರಾಗಿದ್ದರು. ಆದರೆ ಬಹುತೇಕರು ಮುಖಂಡರು ಮತ್ತು ಪ್ರಮುಖ ಕಾರ್ಯಕರ್ತರು ಸಭೆಗೆ ಗೈರು ಹಾಜರಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಮಾಜಿ ಶಾಸಕ ರಫೀಕ್ ಅಹಮದ್ ನಾಲ್ಕೈದು ದಿನಗಳೊಳಗೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಭೆಯನ್ನು ಕರೆದು ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.
ಇಂದು ಷಫಿ ಅಹಮದ್ ಕರೆದ ಸಭೆಗೆ ಬಹುತೇಕ ಮುಖಂಡರು ಗೈರು ಹಾಜರಾಗಿದ್ದರು. ಈ ಹಿನ್ನೆಲೆಯಲ್ಲಿ ನಾಳೆ ಮತ್ತೊಂದು ಸಭೆ ಕರೆಯಲಾಗಿದೆ.