Sunday, September 8, 2024
Google search engine
Homeಆರ್ಥಿಕಜನರನ್ನು ಯಾಮಾರಿಸುವ, ಶ್ರೇಣೀಕೃತ ಬಜೆಟ್ - ಜನರ ವಿಶ್ಲೇಷಣೆ

ಜನರನ್ನು ಯಾಮಾರಿಸುವ, ಶ್ರೇಣೀಕೃತ ಬಜೆಟ್ – ಜನರ ವಿಶ್ಲೇಷಣೆ

ಇಂದು ಮಂಡಿಸಿರುವ ಬಜೆಟ್ ಸ್ಲಂ ನಿವಾಸಿಗಳ ಪಾಲಿಗೆ ನಿರಾಶೆಯಾಗಿದೆ. ಬಡವ-ಶ್ರೀಮಂತರ ಅಂತರ ಸೃಷ್ಟಿಸುವ, ಸ್ಲಂ ಜನರನ್ನು ತಾರತಮ್ಯದಿಂದ ನೋಡುವ ಮುಂಗಡ ಪತ್ರವಾಗಿದೆ. ಸಾಮಾಜಿಕ ನ್ಯಾಯ ಪರಿಪಾಲನೆಯಲ್ಲಿ ಸಮತೋಲನ ಕಾಪಾಡದೇ, ಆಯಾ ಕ್ಷೇತ್ರಗಳಿಗೆ ಸಮಗ್ರ ಮತ್ತು ಸಂಪೂರ್ಣ ಅಭಿವೃದ್ಧಿಗೆ ಆದ್ಯತೆ ನೀಡದೇ ಸಾಮಾಜಿಕ ಅಂತರವನ್ನು ಅಭಿವೃದ್ಧಿಯಲ್ಲಿ ತಾರತಮ್ಯತೆಯನ್ನು ಅನುಷ್ಠಾನಗೊಳಿಸುವ ಮೂಲಕ ಶ್ರೇಣೀಕೃತ ವ್ಯವಸ್ಥೆಗೆ ಮುನ್ನುಡಿ ಬರೆಯಲಾಗಿದೆ ಎಂದು ಸ್ಲಂ ಜನಾಂದೋಲನ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಟೀಕಿಸಿದ್ದಾರೆ.

ಎಸ್.ಸಿ ಮತ್ತು ಎಸ್.ಟಿ ಸಮುದಾಯಗಳ ಜನಸಂಖ್ಯೆಗನುಗುಣವಾಗಿ ಹಣ ಮೀಸಲಿಡದೇ ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಕೈಗೆಟುಕುವ ದರದಲ್ಲಿ ಸಾರ್ವಜನಿಕರಿಗೆ ದೊರಕಿಸಲು ಮುಂದಾಗಿರುವುದು ಜಾಗತಿಕ ಬಂಡವಾಳ ಹೂಡಿಕೆಯನ್ನು ಪ್ರೋತ್ಸಾಹಿಸುವ ಮೂಲಕ ಕಾರ್ಪೋರೇಟ್ ವ್ಯವಸ್ಥೆಯನ್ನು ನವ ಕರ್ನಾಟಕಕ್ಕೆ ಪರಿಚಯಿಸಿರುವುದು ಈ ಬಜೆಟ್ ನಲ್ಲಿ ಸ್ಪಷ್ಟವಾಗಿದೆ ಎಂದು ಆರೋಪಪಿಸಿದ್ದಾರೆ.

ಸ್ಲಂ ಜನರ ವಸತಿ ಸಬ್ಸಿಡಿಯನ್ನು 4 ಲಕ್ಷಕ್ಕೆ ಹೆಚ್ಚಿಸುವ ಭರವಸೆ ದೊರಕಿತ್ತು. ಆದರೆ ಇದು ಹುಸಿಯಾಗಿದೆ. ಈ ಬಜೆಟ್ ನಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ 102 ಕೋಟಿ ರೂಗಳನ್ನು ಮಾತ್ರ ನೀಡಲಾಗಿದೆ. ಸರ್ಕಾರಿ ಮಾಲಿಕತ್ವದಲ್ಲಿರುವ ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುವ 3.36 ಲಕ್ಷ ಕುಟುಂಬಗಳಿಗೆ ಭೂಮಾಲಿಕತ್ವದ ಹಕ್ಕುಪತ್ರ ನೀಡಲಾಗುವುದು ಎಂದಿದ್ದಾರೆ. ಈ ಕೆಲಸ ಆಗಿಲ್ಲ.

ಬೆಂಗಳೂರು ನಗರದಲ್ಲಿ 20 ಸಾವಿರ ಮನೆಗಳನ್ನು ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಸ್ತಾಂತರಿಸುವ ಭರವಸೆ ನೀಡಿದ್ದು, ನಮ್ಮ ನೆಲೆ ಎಂಬ ಹೊಸ ಯೋಜನೆಯಲ್ಲಿ ಕರ್ನಾಟಕ ಗೃಹ ಮಂಡಳಿಯಿಂದ ಅಭಿವೃದ್ಧಿಗೊಳಿಸಲು ನಿವೇಶನಗಳ ಪೈಕಿ ಮೂರನೇ ಒಂದು ಭಾಗವನ್ನು ಅಂದರೆ 10 ಸಾವಿರ ನಿವೇಶನಗಳನ್ನು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಹಂಚಿಕೆ ಮಾಡುವುದಾಗಿ ಉಲ್ಲೇಖಿಸಲಾಗಿದೆ. ಆದರೆ ರಾಜ್ಯದಲ್ಲಿ ಸ್ಲಂ ಜನರನ್ನು ಒಂದು ಸಮುದಾಯವಾಗಿ ಗುರುತಿಸಿಲ್ಲ ಎಂದು ದೂರಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿರುವ ಬಜೆಟ್ ಚುನಾವಣಾ ಬಜೆಟ್ ಆಗಿದೆ. ಜನರು ಇದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಈಗ ಬಜೆಟ್ ನಲ್ಲಿ ಘೋಷಣೆ ಮಾಡಿರುವ ಯಾವ ಯೋಜನೆಗಳನ್ನು ಜಾರಿ ಮಾಡಲಾಗಲ್ಲ. ಹೀಗಾಗಿ ಈ ಬಜೆಟ್ ನಲ್ಲಿ ಜನರಿಗೆ ಆಸೆ ಹುಟ್ಟಿಸಿ ಯಾಮಾರಿಸುವ ಕೆಲಸ ಮಾಡಲಾಗುತ್ತದೆ. ಇಡೀ ಬಜೆಟ್ ಮತಗಳ ಮೇಲೆ ಕಣ್ಣಿಟ್ಟು ಮಂಡಿಸಲಾಗಿದೆ ಎಂದು ಯುವ ಮುಖಂಡ ಕೊಟ್ಟಾ ಶಂಕರ್ ಆರೋಪಿಸಿದ್ದಾರೆ.

ಯುವ ಮುಖಂಡ ಚಿನ್ನಪ್ಪ ದಿ ನ್ಯೂಸ್ ಕಿಟ್ ಜೊತೆ ಮಾತನಾಡಿ ಇದೊಂದು ಚುನಾವಣೆ ಗಿಮಿಕ್. ಜನರಿಗೆ ಆಶ್ವಾಸನೆ ನೀಡಿ ಮತಗಳನ್ನು ಪಡೆಯಲು ಮಾಡಿರುವ ತಂತ್ರಗಾರಿಕೆಯಾಗಿದೆ. ಈ ಬಜೆಟ್ ನಿಂದ ರೈತರು, ಕೂಲಿ ಕಾರ್ಮಿಕರು, ಮಹಿಳೆಯರು, ಯುವಜನರು ಮತ್ತು ವಿದ್ಯಾರ್ಥಿಗಳಿಗೆ ಯಾವುದೇ ಲಾಭ ಇಲ್ಲ. ಅಷ್ಟೇ ಅಲ್ಲ ಜನರು ಯಾವುದೇ ನಿರೀಕ್ಷೆಯನ್ನು ಮಾಡುವಂತೆಯೇ ಇಲ್ಲ ಎಂದು ಹೇಳಿದ್ದಾರೆ.

ಅಧ್ಯಾಪಕ ಜಿ.ಕೆ.ನಾಗಣ್ಣ ಮಾತನಾಡಿ, ಬಜೆಟ್ ನಲ್ಲಿ ಅಲೆಮಾರಿ ಬುಡಕಟ್ಟು ಸಮುದಾಯಗಲಿಗೆ ಏನೂ ನೀಡಿಲ್ಲ. ಬಜೆಟ್ ನಲ್ಲಿ ದಾನ ದತ್ತಿ ಇಲಾಖೆಗೆ ಹಣವನ್ನು ನೀಡಿದ್ದು, ಇದರಿಂದ ಸಾಮಾನ್ಯರಿಗೆ ಯಾವುದೇ ಉಪಯೋಗವಿಲ್ಲ. ಸಾಮಾನ್ಯರು ನೀಡುವ ತೆರಿಗೆ ಹಣದಲ್ಲಿ ಈ ರೀತಿ ದಾನ-ದತ್ತಿ ನೀಡುವುದು ಸಾರ್ವಜನಿಕರ ಹಣವನ್ನು ಪೋಲು ಮಾಡಿದಂತೆಯೇ ಸರಿ. ಅದರ ಬದಲು ಶಾಲೆಯ ಅಭಿವೃದ್ಧಿಗೆ ಒತ್ತು ನೀಡಬೇಕಿತ್ತು. ಇನ್ನೂ ನಿರುದ್ಯೋಗಳ 1 ಸಾವಿರ ಮಾಸಾಶನ ಕೊಡುತ್ತೇವೆ ಎನ್ನುವುದು ಪದವಿಧರರನ್ನು ಅವಮಾನಿಸಿದಂತೆ. ಬಜೆಟ್ ಅಭಿವೃದ್ಧಿಗೆ ಪೂರಕವಾಗಿರಬೇಕಿತ್ತು. ಇದು ಆಗಿಲ್ಲ ಎಂದಿದ್ದಾರೆ.

ಎಸ್ಎಫ್ಐ ತುಮಕೂರು ಜಿಲ್ಲಾಧ್ಯಕ್ಷ ಹಾಗೂ ಯುವ ವಕೀಲ ಈ.ಶಿವಣ್ಣ ಮಾತನಾಡಿ, ಇದೊಂದು ಶಿಕ್ಷಣ ವಿರೋಧಿ ಬಜೆಟ್ ಆಗಿದೆ. ರಾಜ್ಯದ ಉನ್ನತ ಮತ್ತು ಪ್ರಾಥಮಿಕ ಹಂತದ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಳೆದ ಬಾರಿಯ ಬಜೆಟ್ ನಲ್ಲಿ ಕಳೆದ ಬಾರಿ ಇದ್ದ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಶೇ.12ರಷ್ಟು ಅನುದಾನ ಘೋಷಣೆ ಮಾಡಿತ್ತು. ಆದರೆ ಈ ಬಾರಿ ಶಿಕ್ಷಣ ಕ್ಷೇತ್ರಕ್ಕೆ 11ರಷ್ಟು ಮಾತ್ರ ಅನುದಾನವನ್ನು ಮೀಸಲಿಟ್ಟಿದೆ ಎಂದರು.

ಕೋವಿಡ್ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳು ಉಂಟಾಗಿ ವಿದ್ಯಾರ್ಥಿಗಳು ಸಾಕಷ್ಟು ತೊಂದರೆಗೆ ಒಳಗಾದರು. ಇದನ್ನು ಗಮನಿಸದೆ ಮಠಮಾನ್ಯಗಳಿಗೆ, ಕಾರ್ಪೋರೇಟ್ ಕುಳಗಳಿಗೆ ಅತಿಹೆಚ್ಚು ಲಾಭವನ್ನು ಉಂಟುಮಾಡುವ ರೀತಿಯಲ್ಲಿ ಈ ಬಜೆಟ್ ಇದ್ದು ಸಂಪೂರ್ಣವಾಗಿ ವಿದ್ಯಾರ್ಥಿ ಮತ್ತು ರೈತ ವಿರೋಧಿ ಬಜೆಟ್ ಆಗಿದೆ. ಶಾಲೆಗಳ ಅಭಿವೃದ್ಧಿಗೆ 8 ಸಾವಿರ ಕೊಠಡಿಗಳನ್ನು ನಿರ್ಮಾಣ ಮಾಡುವುದಾಗಿ ಹೇಳಿದೆ. ಆದರೆ ರಾಜ್ಯದಲ್ಲಿ 22 ಸಾವಿರ ಸರ್ಕಾರಿ ಶಾಲೆಗಳು ಕೊಠಡಿಗಳಿಲ್ಲದೆ ತೊಂದರೆಯಾಗಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಈ ಬಾರಿ ಶೂ ಮತ್ತು ಸಮವಸ್ತ್ರಗಳನ್ನು ನೀಡಿಲ್ಲ. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸರಿಯಾಗಿ ಹಾಸ್ಟೆಲ್ ವ್ಯವಸ್ಥೆ ಇಲ್ಲ. ಬಸ್ ಪಾಸ್ ಸಮರ್ಪಕವಾಗಿ ನೀಡಿಲ್ಲ. ಈ ರೀತಿ ಹಲವಾರು ಗೊಂದಲಗಳು ಶಿಕ್ಷಣ ಕ್ಷೇತ್ರದಲ್ಲಿದ್ದು ಇವುಗಳನ್ನು ಸರ್ಕಾರ ಗಮನಿಸಿಲ್ಲ ಎಂದು ವಿವರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular