Saturday, October 19, 2024
Google search engine
Homeಮುಖಪುಟಭ್ರಷ್ಟಾಚಾರ ತೊಲಗಿಸಿ ಬೆಂಗಳೂರು ಉಳಿಸಿ ಘೋಷಣೆಯಡಿ ಬೆಂಗಳೂರಿನ 300 ಕಡೆ ಕಾಂಗ್ರೆಸ್ ಪ್ರತಿಭಟನೆ

ಭ್ರಷ್ಟಾಚಾರ ತೊಲಗಿಸಿ ಬೆಂಗಳೂರು ಉಳಿಸಿ ಘೋಷಣೆಯಡಿ ಬೆಂಗಳೂರಿನ 300 ಕಡೆ ಕಾಂಗ್ರೆಸ್ ಪ್ರತಿಭಟನೆ

ಭ್ರಷ್ಟಾಚಾರ ತೊಲಗಿಸಿ ಬೆಂಗಳೂರು ಉಳಿಸಿ ಎಂಬ ಘೋಷಣೆ ಮೂಲಕ ಕಾಂಗ್ರೆಸ್ ಪಕ್ಷದ ವತಿಯಿಂದ ಬೆಂಗಳೂರಿನ 300ಕ್ಕೂ ಹೆಚ್ಚು ಸ್ಥಳಗಳಲ್ಲಿ ಮೌನ ಪ್ರತಿಭಟನೆ ನಡೆಸಲಾಯಿತು.

ಕೆಪಿಸಿಸಿ ಕಾರ್ಯಧ್ಯಕ್ಷರಾದ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು. ನಾವು ಟ್ರಿನಿಟಿ ವೃತ್ತದ ಬಳಿ ನಡೆದ ಪ್ರತಿಭಟನೆಯಲ್ಲಿ ಪಕ್ಷದ ನಾಯಕರೆಲ್ಲರೂ ಪಾಲ್ಗೊಂಡಿದ್ದೆವು.

ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ರಾಜ್ಯಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಂಗಳೂರಿನ ರಸ್ತೆಗಳು ಗುಂಡಿಮಯವಾಗಿದ್ದು, ಬೆಂಗಳೂರು ರಸ್ತೆ ಗುಂಡಿಗಳ ರಾಜಧಾನಿಯಾಗಿದೆ. ಕಸದ ಸಮಸ್ಯೆ ಹೆಚ್ಚಾಗಿದೆ. 40ರಷ್ಟು ಕಮಿಷನ್ ಭ್ರಷ್ಟಾಚಾರದಿಂದ ನಗರದ ಕಾಮಗಾರಿಗಳು ಕಳಪೆಯಾಗಿವೆ. ದೇಶದಲ್ಲಿ ಕರ್ನಾಟಕ ಭ್ರಷ್ಟಾಚಾರದ ರಾಜಧಾನಿಯಾಗಿದೆ ಎಂದು ಆಪಾದಿಸಿದರು.

ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಂದ ಅನೇಕ ಸಾವುಗಳು ಸಂಭವಿಸಿದ್ದು, ಬಿಜೆಪಿ ಸರ್ಕಾರ ಈ ಸಮಸ್ಯೆಗೆ ಪರಿಹಾರ ನೀಡುವಲ್ಲಿ ವಿಫಲವಾಗಿದೆ ಎಂದು ದೂರಿದರು.

ಸರ್ಕಾರದ ದುರಾಡಳಿತದ ಬಗ್ಗೆ ಕಾಂಗ್ರೆಸ್ ಪಕ್ಷದಿಂದ ಕೇಳಲಾದ ಪ್ರಶ್ನೆಗಳಿಗೆ ಸರ್ಕಾರದಿಂದ ಯಾವುದೇ ಉತ್ತರ ಬಂದಿಲ್ಲ. ಬಿಜೆಪಿ ಸರ್ಕಾರಕ್ಕೆ ಬೆಂಗಳೂರು ನಗರ ಹಾಗೂ ರಾಜ್ಯದ ಜನರಿಗೆ ನೀಡಿದ್ದ ಮಾತನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.

ಜನರ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಲು ಕಾಂಗ್ರೆಸ್ ಸರಕಾರದಿಂದ ಮಾತ್ರ ಸಾಧ್ಯ. ನಾವು ಜನರ ಧ್ವನಿಯಾಗಿ ಕೆಲಸ ಮಾಡಲು ಪ್ರಜಾಧ್ವನಿ ಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ ಎಂದರು.

ಬೀದಿ ಬದಿ ವ್ಯಾಪಾರಿಗಳು ದಿನನಿತ್ಯ ವ್ಯಾಪಾರ ಮಾಡಲು ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರಿಂದ ಹೆಚ್ಚಿನ ಕಿರುಕುಳ ಎದುರಿಸುತ್ತಿದ್ದಾರೆ. ಪ್ರತಿ ಕ್ಷೇತ್ರದಲ್ಲಿ ಬೀದಿ ವ್ಯಾಪಾರಿಗಳಿಂದಲೇ ತಿಂಗಳಿಗೆ ಒಂದು ಕೋಟಿಯಷ್ಟು ಹಣ ಸಂಗ್ರಹಿಸಲಾಗುತ್ತಿದೆ. ನಿತ್ಯ ಪ್ರತಿ ವ್ಯಾಪಾರಿಯಿಂದ ಇನ್ನೂರು, ಮುನ್ನೂರು ರೂಪಾಯಿಗಳನ್ನು ವಸೂಲಿ ಮಾಡಲಾಗುತ್ತಿದೆ. ಈ ಮಟ್ಟದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರ ನಡೆಸುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ಸರ್ಕಾರದ ಆಡಳಿತದಲ್ಲಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕೇರಿದೆ. ಜನರ ಆದಾಯ ಪಾತಾಳಕ್ಕೆ ಕುಸಿಯುತ್ತಿದೆ. ಸರ್ಕಾರದ ದುರಾಡಳಿತದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕಾಂಗ್ರೆಸ್ ಪಕ್ಷ ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಈ ಪ್ರತಿಭಟನೆ ಹಮ್ಮಿಕೊಂಡಿದೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular