Saturday, October 19, 2024
Google search engine
Homeಜಿಲ್ಲೆಕಾಡುಗೊಲ್ಲರನ್ನು ಎಸ್.ಟಿ.ಗೆ ಸೇರಿಸಲು ಆಗ್ರಹ

ಕಾಡುಗೊಲ್ಲರನ್ನು ಎಸ್.ಟಿ.ಗೆ ಸೇರಿಸಲು ಆಗ್ರಹ

ಬುಡಕಟ್ಟುಗಳ ಲಕ್ಷಣಗಳನ್ನು ಹೊಂದಿರುವ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಬೇಕೆಂದು ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಡಿ.ಕೆ.ಗಂಗಾಧರ್ ಒತ್ತಾಯಿಸಿದ್ದಾರೆ.

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕು ಕೃಷ್ಣಗಿರಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘ ಬೆಂಗಳೂರು ಮತ್ತು ತಾಲ್ಲೂಕು ಸಂಘದ ವತಿಯಿಂದ ಕಾಡುಗೊಲ್ಲರ ನಡಿಗೆ ಎಸ್.ಟಿ.ಮೀಸಲಾತಿಯ ಕಡೆಗೆ ಮತ್ತು ಹಟ್ಟಿ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಲೋಕೂರ್ ಸಮಿತಿ ನೀಡಿರುವ ವರದಿಯಂತೆ ಕಾಡುಗೊಲ್ಲರು ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಪ್ರತ್ಯೇಕ ಸಂಸ್ಕೃತಿ ಇದೆ. ಗಿರಿಜನರ ಲಕ್ಷಣಗಳನ್ನು ಹೊಂದಿದ್ದೇವೆ. ಹಾಗಾಗಿ ನಾವು ಎಸ್.ಟಿಗೆ ಸೇರಲು ಅರ್ಹತೆ ಹೊಂದಿದ್ದೇವೆ ಎಂದು ತಿಳಿಸಿದರು.

ಕಾಡುಗೊಲ್ಲರು ಕುರಿ ಮೇಕೆಗಳನ್ನು ಕಾಯ್ದುಕೊಂಡು ಪ್ರತ್ಯೇಕ ವಾಸವಿದ್ದು ಸಮಾಜದ ಮುಖ್ಯವಾಹಿನಿಗೆ ಬಂದಿಲ್ಲ. ಹಾಗಾಗಿ ರಾಜ್ಯದ ಎಲ್ಲೆಡೆ ಕಾಡುಗೊಲ್ಲರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.

ನಮ್ಮ ಸಮುದಾಯವನ್ನು ಎಸ್.ಟಿ.ಗೆ ಸೇರಿಸಿದರೆ ಜನಾಂಗದ ಅಭಿವೃದ್ಧಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದರು.

ಕಾಡುಗೊಲ್ಲ ಸಮುದಾಯ ಮುಖಂಡ ಈ.ಗೌಡರಂಗಪ್ಪ ಮಾತನಾಡಿ, ರಾಜ್ಯ ಸರ್ಕಾರ ಈಗಾಗಲೇ ಕಾಡುಗೊಲ್ಲರನ್ನು ಎಸ್.ಟಿ.ಗೆ ಸೇರಿಸುವಂತೆ ಕೇಂದ್ರಕ್ಕೆ ವರದಿ ಕಳಿಸಿದೆ. ವರದಿಯಲ್ಲಿ ಕೆಲ ಲೋಪಗಳಿಂದಾಗಿ ವಾಪಸ್ಸು ಬಂದಿತ್ತು. ಈಗ ಮತ್ತೆ ಕೇಂದ್ರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಚುನಾವಣೆ ಹತ್ತಿರವಿದೆ. ಚುನಾವಣೆಗೂ ಮುನ್ನ ಕಾಡುಗೊಲ್ಲರನ್ನು ಎಸ್.ಟಿಗೆ ಸೇರ್ಪಡೆ ಮಾಡಬೇಕು. ಹಾಗಾಗಿ ಹಟ್ಟಿಗಳಲ್ಲಿ ಕಳೆದ 40 ದಿನಗಳಿಂದಲೂ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಕಾಡುಗೊಲ್ಲರನ್ನು ಎಸ್.ಟಿ. ಪಟ್ಟಿಗೆ ಸೇರಿಸದಿದ್ದರೆ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಗೌಡರಂಗಪ್ಪ ಎಚ್ಚರಿಕೆ ನೀಡಿದ್ದಾರೆ.

ಸಮಾರಂಭದಲ್ಲಿ ಸಮುದಾಯದ ಹಿರಿಯ ಮುಖಂಡ ಮುಗದಾಳಬೆಟ್ಟ ನರಸಿಂಹಪ್ಪ, ಎಚ್.ಎಂ.ಟಿ ರಮೇಶ್, ಸಮುದಾಯದ ಮುಖಂಡರಾದ ಈ. ಗೌಡರಂಗಪ್ಪ, ಶಿಕ್ಷಕ ಬೋರಯ್ಯ, ಎಲ್ಐಸಿ ಚಿಕ್ಕಣ್ಣ, ಗ್ರಾಮದ ಮುಖಂಡರಾದ ದೊಡ್ಡಚಿತ್ತಯ್ಯ, ಬೊಮ್ಮಣ್ಣ, ಬೋರಪ್ಪ, ನರಸಿಂಹಪ್ಪ, ತಮ್ಮಣ್ಣ, ಗ್ರಾಮ ಪಂಚಾಯ್ತಿ ಸದಸ್ಯ ಶಿವಕುಮಾರ್, ರಾಮಪ್ಪ, ವಿ.ಡಿ.ಶಿವಣ್ಣ, ಗ್ರಾಮದ ಮಹಿಳೆಯರಾದ ನಾಗಮ್ಮ, ಬೊಮ್ಮಜ್ಜಿ, ಸಣ್ಣ ನರಸಮ್ಮ, ಗುಂಡಕ್ಕ ಇತರರು ಹಾಜರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular